ಬೆಂಗಳೂರು: ಪೋಡಿ ದುರಸ್ತಿಯನ್ನು ಆನ್ಲೈನ್ ಮೂಲಕ ಮಾಡಿಕೊಡಲಾಗುತ್ತಿದೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ತಿಳಿಸಿದ್ದಾರೆ.
ವಿವಿಧ ಜಿಲ್ಲೆಗಳ ಜಿಲ್ಲಾಧಿಕಾರಿಗಳು ಮತ್ತು ಸರ್ವೆ ಇಲಾಖೆ ಮುಖ್ಯಸ್ಥರೊಂದಿಗೆ ಶುಕ್ರವಾರ ಪ್ರಗತಿ ಪರಿಶೀಲನಾ ಸಭೆ ನಡೆಸಿದ ಸಚಿವರು ನಂತರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿ, ಪ್ರತಿ ತಿಂಗಳ 5 ಸಾವಿರ ಪೋಡಿ ದುರಸ್ತಿ ಮಾಡಿಕೊಡುವ ಗುರಿ ನಿಗದಿ ಮಾಡಲಾಗಿದ್ದು, ಆಂದೋಲನ ರೂಪದಲ್ಲಿ ಕೈಗೊಳ್ಳಲಾಗಿದೆ ಎಂದು ಹೇಳಿದ್ದಾರೆ.
ಸರಳೀಕೃತ ರೂಪದಲ್ಲಿ ಪೋಡೊ ದುರಸ್ತಿ ಮಾಡಿಕೊಡಲಿದ್ದು, ಇದರಿಂದ ರೈತರು ಕಚೇರಿಗಳಿಗೆ ವಿನಾಕಾರಣ ಅಲೆಯುವುದು ತಪ್ಪುತ್ತದೆ. ನಾವೇ ಮನೆಗಳಿಗೆ ಹೋಗಿ 1-5 ದಾಖಲೆಗಳನ್ನು ಸಿದ್ಧಪಡಿಸುತ್ತೇವೆ. ಇವುಗಳ ಪೈಕಿ 30,476 ಪ್ರಕರಣಗಳಲ್ಲಿ ಸರ್ವೆ ಇಲಾಖೆಯಿಂದ ಭೂಮಾಪನ ಕಾರ್ಯ ಕೈಗೆತ್ತಿಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.
ತಹಶೀಲ್ದಾರ್ ಕಚೇರಿಗಳಲ್ಲಿರುವ ಎ ಮತ್ತು ಬಿ ದರ್ಜೆಯ ಕಡತಗಳನ್ನು ಭೂ ಸುರಕ್ಷಾ ಯೋಜನೆ ಅಡಿ ಗಣಕೀಕರಣ ಮಾಡಿ ಇಂಡೆಕ್ಸ್ ಕ್ಯಾಟಲಾಗ್ ಮಾಡಿ ಸ್ಕ್ಯಾನ್ ಮಾಡಲಾಗುತ್ತಿದೆ. ಇದುವರೆಗೆ 18.28 ಕೋಟಿ ಪುಟಗಳಷ್ಟು ಸ್ಕ್ಯಾನ್ ಮಾಡಲಾಗಿದ್ದು, ಇನ್ನು ಮುಂದೆ ಆನ್ಲೈನ್ ನಲ್ಲಿ ಅರ್ಜಿ ಹಾಕಿ ಪ್ರಮಾಣೀಕೃತ ದಾಖಲೆ ಪಡೆದುಕೊಳ್ಳಬಹುದು ಎಂದು ಹೇಳಿದ್ದಾರೆ.