ಬೆಂಗಳೂರು: ಇಡೀ ರಾಜ್ಯವನ್ನೇ ಬೆಚ್ಚಿ ಬೀಳಿಸಿದ್ದ ನಿವೃತ್ತ ಡಿಜಿ-ಐಜಿಪಿ ಓಂ ಪ್ರಕಾಶ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪುತ್ರ ಕಾರ್ತಿಕೇಶ್ ತಾಯಿ ಹಾಗೂ ತಂಗಿ ವಿರುದ್ಧ ದೂರು ದಾಖಲಿಸಿದ್ದಾರೆ.
ಬೆಂಗಳೂರಿನ ಹೆಚ್.ಎಸ್.ಆರ್.ಲೇಔಟ್ ಪೊಲೀಸ್ ಠಾಣೆಯಲ್ಲಿ ತನ್ನ ತಂದೆ ನಿವೃತ್ತ ಐಜಿಪಿ ಓಂ ಪ್ರಕಾಶ್ ಹತ್ಯೆ ಬಗ್ಗೆ ತಾಯಿ ಪಲ್ಲವಿ ಹಾಗೂ ತಂಗಿ ಕೃತಿ ಮೇಲೆ ಅನುಮಾನವಿದೆ. ನನ್ನ ತಾಯಿ ಯಾವಾಗಲೂ ತಂದೆಗೆ ಕೊಲೆ ಬೆದರಿಕೆ ಹಾಕುತ್ತಿದ್ದರು ಎಂದು ದೂರು ನೀಡಿದ್ದಾರೆ.
ನನ್ನ ತಂದೆಗೆ ಕಳೆದ ಒಂದು ವಾರದಿಂದ ತಾಯಿ ಕೊಲೆ ಬೆದರಿಕೆ ಹಾಕುತ್ತಿದ್ದರು. ಅವರು ತನ್ನ ಸಹೋದರಿ ಸರಿತಾ ಮನೆಗೆ ಹೋಗಿ ಅಲ್ಲಿಯೇ ಇದ್ದರು. ಎರಡು ದಿನಗಳ ಹಿಂದೆ ನನ್ನ ತಂಗಿ ಕೃತಿ ತಂದೆಯವರನ್ನು ಮನೆಗೆ ಬರುವಂತೆ ಹೇಳಿ ಕರೆದುಕೊಂಡುಬಂದಿದ್ದರು. ನಾನು ಏ.20ರಂದು ಸಂಜೆ ದೊಮ್ಮಲೂರಿನಲ್ಲಿದ್ದೆ. ಆಗ ನನಗೆ ಕರೆಯೊಂದು ಬಂದಾಗ ಮನೆಗೆ ಬಂದಿದ್ದೆ. ಅಷ್ಟರಲ್ಲಿ ನನ್ನ ತಂದೆ ರಕ್ತದ ಮಡುವಲ್ಲಿ ಬಿದ್ದಿದ್ದರು. ಅವರ ಪಕ್ಕದಲ್ಲಿ ಅವರ ದೇಹಕ್ಕೆ ಚುಚ್ಚಿದ್ದ ಬಾಟಲ್, ಚಾಕು ಕೂಡ ಬಿದ್ದಿತ್ತು. ತಂದೆ ಸಾವಿಗೆ ನನ್ನ ತಾಯಿ ಹಾಗೂ ತಂಗಿಯ ಮೇಲೆ ಕೊಲೆ ಶಂಕೆಯಿದ್ದು ತನಿಖೆ ನಡೆಸುವಂತೆ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಮಗ ಕಾರ್ತಿಕೇಶ್ ದೂರಿನ ಹಿನ್ನೆಲೆಯಲ್ಲಿ ಓಂ ಪ್ರಕಾಶ್ ಪತ್ನಿ ಪಲ್ಲವಿ ಹಾಗೂ ಮಗಳು ಕೃತಿ ವಿರುದ್ಧ ಎಫ್ಐಆರ್ ದಾಖಲಾಗಿದೆ.