ಸ್ವಯಂ ಇಚ್ಛೆಯಿಂದ ಮುಂದೆ ಬಂದ ಅರಣ್ಯವಾಸಿಗಳ ಸ್ಥಳಾಂತರ: 15 ಲಕ್ಷ ರೂ. ನೆರವು

ಬೆಳಗಾವಿ: ಅರಣ್ಯ ಸಂರಕ್ಷಣೆಯಲ್ಲಿ ಅರಣ್ಯವಾಸಿಗಳ ಪಾತ್ರ ಹಿರಿದಾಗಿದೆ  ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ ಖಂಡ್ರೆ ಅಭಿಪ್ರಾಯಪಟ್ಟಿದ್ದಾರೆ.

ಬೆಳಗಾವಿ ಜಿಲ್ಲೆ, ಖಾನಾಪುರ ತಾಲೂಕು ಹೆಮ್ಮಡಗಾದಲ್ಲಿಂದು ಭೀಮಗಢ ಅರಣ್ಯ ವಲಯದ ತಳೇವಾಡಿ (ಗೌವಳಿ) ಗ್ರಾಮದಿಂದ ಸ್ವಯಂ ಪ್ರೇರಿತವಾಗಿ ಕಾಡಿನಿಂದ ಹೊರಗೆ ಬರಲು ಇಚ್ಛಿಸಿರುವ 27 ಕುಟುಂಬಗಳಿಗೆ ಚೆಕ್ ವಿತರಿಸಿ ಮಾತನಾಡಿದ ಅವರು, ಅರಣ್ಯ ಸಂರಕ್ಷಣೆಯಲ್ಲಿ ಅರಣ್ಯ ಸಿಬ್ಬಂದಿಯ ಜೊತೆಗೆ ಅರಣ್ಯವಾಸಿಗಳೂ ಮಹತ್ವದ ಪಾತ್ರ ವಹಿಸಿದ್ದಾರೆ ಎಂದರು.

ಮಾನವನ ಹಸ್ತಕ್ಷೇಪ ಇಲ್ಲದಿದ್ದರೆ ಅರಣ್ಯ ಸಮೃದ್ಧವಾಗಿ ಬೆಳೆಯುತ್ತದೆ. ಪ್ರಸಕ್ತ ಕಾಲಘಟ್ಟದಲ್ಲಿ ಅರಣ್ಯದೊಳಗಿನ ವಾಸ ಕಷ್ಟಸಾಧ್ಯ. ಜಗತ್ತು ಆಧುನಿಕವಾಗಿ ಸಾಗುತ್ತಿರುವಾಗ, ದಶಕಗಳಿಂದ ಅರಣ್ಯದಲ್ಲೇ ಮೂಲಸೌಕರ್ಯ ಇಲ್ಲದೆ ಕೆಲವರು ವಾಸಿಸುತ್ತಿದ್ದಾರೆ ಇವರನ್ನು ಮುಖ್ಯವಾಹಿನಿಗೆ ತರುವ ಕಾರ್ಯ ಈಗ ನಡೆಯುತ್ತಿದೆ ಎಂದರು.

ಭೀಮಗಢದ ಅರಣ್ಯ ವ್ಯಾಪ್ತಿಯಲ್ಲಿ 13 ಗ್ರಾಮಗಳಿದ್ದು ಇಲ್ಲಿ ಸುಮಾರು 754 ಕುಟುಂಬಗಳು ವಾಸಿಸುತ್ತಿವೆ. ಈ ಪೈಕಿ ತಳೇವಾಡಿಯ 27 ಕುಟುಂಬಗಳು ಸ್ವಯಂ ಪ್ರೇರಿತರಾಗಿ ಸಮಾಜದ ಮುಖ್ಯವಾಹಿನಿಗೆ ಬರಲು ತೀರ್ಮಾನಿಸಿದೆ ಎಂದರು.

ಹಿಂದಿನ ತಲೆಮಾರಿನ ಅರಣ್ಯವಾಸಿಗಳಿಗೆ ವನ್ಯಜೀವಿಗಳೊಂದಿಗೆ ಸಹಬಾಳ್ವೆ ನಡೆಸುವುದು ಚೆನ್ನಾಗಿ ತಿಳಿದಿತ್ತು, ಆದರೆ ಇಂದಿನ ಪೀಳಿಗೆಯ ಅರಣ್ಯವಾಸಿಗಳಿಗೆ ಅಷ್ಟು ಪರಿಣತಿ ಇಲ್ಲ. ಹೀಗಾಗಿ ನಾಗರಿಕ ಸಮಾಜದಲ್ಲಿ ಅವರು ಬದುಕು ಕಟ್ಟಿಕೊಳ್ಳಲು ಈ ಸ್ಥಳಾಂತರ ಸಹಕಾರಿಯಾಗಲಿದೆ ಎಂದರು.

ಅರಣ್ಯದೊಳಗಿಂದ ಅರಣ್ಯದ ಹೊರಕ್ಕೆ ವಸತಿ ಪ್ರದೇಶಗಳನ್ನು ಸ್ಥಳಾಂತರ ಮಾಡುವುದರಿಂದ ಅರಣ್ಯ ಮತ್ತು ಅರಣ್ಯ ಸಂಪತ್ತು ವೃದ್ಧಿಸುತ್ತದೆ. ಅರಣ್ಯವಾಗಿಸಿಗಳ ಬದುಕೂ ಹಸನಾಗುತ್ತದೆ ಎಂದು ಹೇಳಿದರು.

ಕಳೆದ ಡಿಸೆಂಬರ್ ತಿಂಗಳಲ್ಲಿ ವಿಧಾನಮಂಡಳದ ಅಧಿವೇಶನ ವೇಳೆ ಭೀಮಗಢಕ್ಕೆ ಭೇಟಿ ನೀಡಿದ್ದಾಗ, ಅರಣ್ಯದೊಳಗೆ ತಲೆಯ ಮೇಲೆ ದಿನಸಿ ಹೊತ್ತು ಬರುತ್ತಿದ್ದ ಮಹಿಳೆಯರನ್ನು ನೋಡಿ, ಕಾರು ನಿಲ್ಲಿಸಿ ಮಾತನಾಡಿಸಿದಾಗ, ಒಬ್ಬರು ತಮ್ಮ ಪತಿಯನ್ನು ಹುಲಿ ಕೊಂದು ಹಾಕಿತು ಎಂದು ದುಃಖ ತೋಡಿಕೊಂಡರೆ, ಮತ್ತೊಬ್ಬ ಮಹಿಳೆ ತಮ್ಮ ಪತಿಯ ಮೇಲೆ ಕರಡಿ ದಾಳಿ ಮಾಡಿ ಶಾಶ್ವತ ಅಂಗವೈಕಲ್ಯ ಉಂಟಾಗಿದೆ ಎಂದರು. ಈ ಘಟನೆ ತಮ್ಮ ಮನ ಕಲಕಿತು ಎಂದರು.

ತಳೇವಾಡಿಗೆ ಭೇಟಿ ನೀಡಿದಾಗ ಅಲ್ಲಿನ ಕುಟುಂಬದ ಸದಸ್ಯರು ಸ್ವಯಂ ಇಚ್ಛೆಯಿಂದ ಕಾಡಿನಿಂದ ಹೊರಗೆ ಹೋಗಲು ತಾವು ಸಿದ್ಧವಿರುವುದಾಗಿ ತಿಳಿಸಿದರು. ನಿಯಮಾನುಸಾರ ಕ್ರಮ ಕೈಗೊಳ್ಳಲು ಸೂಚಿಸಿದ್ದೆ. ಇದು ಅದು ಸಾಕಾರವಾಗಿದೆ ಎಂದರು.

ಪ್ರಥಮ ಹಂತದಲ್ಲಿ ಇಂದು 27 ಕುಟುಂಬಗಳಿಗೆ ನಿಯಮಾನುಸಾರ ಮತ್ತು ಕಾನೂನು ಬದ್ಧವಾಗಿ ಪ್ರಥಮ ಹಂತದಲ್ಲಿ ಒಂದು ಪರಿವಾರದ ಘಟಕಕ್ಕೆ ತಲಾ 10 ಲಕ್ಷ ರೂಪಾಯಿ ನೀಡಲಾಗುತ್ತಿದೆ. ಉಳಿದ 5 ಲಕ್ಷ ರೂಪಾಯಿಗಳನ್ನು ಅವರು ಸ್ಥಳಾಂತರ ಪ್ರಕ್ರಿಯೆ ಪೂರ್ಣಗೊಳಿಸಿದ ತರುವಾಯ ನೀಡಲಾಗುವುದು ಎಂದರು.

ಒತ್ತಾಯಪೂರ್ವಕ ಸ್ಥಳಾಂತರ ಅಲ್ಲ:

ಒತ್ತಾಯಪೂರ್ವಕವಾಗಿ ಅರಣ್ಯದಿಂದ ಅರಣ್ಯವಾಸಿಗಳನ್ನು ಹೊರಗೆ ಕಳಿಸುತ್ತಿಲ್ಲ ಎಂದು ಸ್ಪಷ್ಟಪಡಿಸಿದ ಸಚಿವರು, ಸ್ವಯಂ ಇಚ್ಛೆಯಿಂದ ತಾವೇ ಮುಂದೆ ಬಂದ ಅರಣ್ಯವಾಸಿಗಳನ್ನು ಸಮಾಜದ ಮುಖ್ಯವಾಹಿನಿಗೆ ತರುವ ಪ್ರಯತ್ನವನ್ನು ಸರ್ಕಾರ ಮಾಡುತ್ತದೆ ಎಂದರು.

ಇಂದು ಸ್ಥಳಾಂತರಗೊಳ್ಳುತ್ತಿರುವ ಕುಟುಂಬದ ಸದಸ್ಯರೊಂದಿಗೆ ಸಂವಾದ ನಡೆಸಿದಾಗ, ಅವರು ಅನಾರೋಗ್ಯದ ಸಂದರ್ಭದಲ್ಲಿ ಚಿಕಿತ್ಸೆ ಸಿಗದೆ ತೊಂದರೆ ಅನುಭವಿಸಿದ್ದನ್ನು ತಿಳಿಸಿದರು. ಹೀಗಾಗಿ ಅರಣ್ಯವಾಸಿಗಳು ಮತ್ತು ಅವರ ಮುಂದಿನ ಪೀಳಿಗೆ ಉತ್ತಮ ಜೀವನ ನಡೆಸಲು ಅನುವಾಗುವಂತೆ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದರು.

ಕಾರ್ಯಕ್ರಮ ಉದ್ಘಾಟಿಸಿದ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಕಳೆದ 20 ವರ್ಷಗಳಿಂದ ಸ್ಥಳಾಂತರದ ಬೇಡಿಕೆ ಇತ್ತು. ಈಶ್ವರ ಖಂಡ್ರೆ ಅವರು ಬಹಳಷ್ಟು ಮುತುವರ್ಜಿ ವಹಿಸಿ ಜನಪರವಾದ ಮಹತ್ವದ ಯೋಜನೆ ಮಾಡಿದ್ದಾರೆ. ಅವರಿಗೆ ಅಭಿನಂದನೆ ಸಲ್ಲಬೇಕು ಎಂದರು.

 ಅರಣ್ಯ ಇದ್ದರೆ ಮಾತ್ರ ಮಳೆ, ಬೆಳೆ ಆಗಲು ಸಾಧ್ಯ. ಅರಣ್ಯ ಉಳಿಸಲು ಪ್ರಯತ್ನಿಸಬೇಕು, ಜೊತೆಗೆ ನಾಗರಹೊಳೆ, ಬಂಡೀಪುರದ ರೀತಿಯಲ್ಲಿಯೇ ಇಲ್ಲಿಯೂ ಪರಿಸರ ಪ್ರವಾಸೋದ್ಯಮಕ್ಕೆ ಉತ್ತೇಜನ ದೊರಕಬೇಕು ಎಂದು ಹೇಳಿದರು.

ಇದೊಂದು ಐತಿಹಾಸಿಕ ಕಾರ್ಯಕ್ರಮವಾಗಿದೆ. ಇದರ ಯಶಸ್ಸಿನ ಬಳಿಕ, ಇತರ ತಾಂಡಾಗಳ ಜನರೂ ಸ್ವ ಇಚ್ಛೆಯಿಂದ ಕಾಡಿನಿಂದ ಹೊರಬರಲು ಇಚ್ಛಿಸಿದರೆ ಸರ್ಕಾರ ಪ್ರಯತ್ನ ಮಾಡಲಿದೆ ಎಂದು ಸತೀಶ್ ಜಾರಕಿಹೊಳಿ ಹೇಳಿದರು.

ಖಾನಾಪುರ ಶಾಸಕ ವಿಠ್ಠಲ ಹಲಗೇಕರ್ ಮಾತನಾಡಿ ಇದೊಂದು ಮಹತ್ವದ ಕಾರ್ಯಕ್ರಮ. ಈಶ್ವರ ಖಂಡ್ರೆ ಅವರು ಅರಣ್ಯ ಸಚಿವರಾಗಿ ಒಂದೇ ವರ್ಷದಲ್ಲಿ ಸ್ಥಳಾಂತರ ಕಾರ್ಯಕ್ರಮ ಆರಂಭಿಸಿದ್ದು, ಇಂದು ಚೆಕ್ ವಿತರಿಸುತ್ತಿದ್ದಾರೆ ಅವರಿಗೆ ಅಭಿನಂದನೆ ಸಲ್ಲಬೇಕು ಎಂದರು.

ಕಾರ್ಯಕ್ರಮದಲ್ಲಿ ಮುಖ್ಯವನ್ಯಜೀವಿ ಪರಿಪಾಲಕರಾದ ಸುಭಾಷ್ ಮಾಲ್ಕಡೆ, ಕಾಂಪಾ ಮುಖ್ಯ ನಿರ್ವಹಣಾಧಿಕಾರಿ ರಾಧಾ ದೇವಿ, ಜಿಲ್ಲಾಧಿಕಾರಿ ಮಹಮದ್ ರೋಶನ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಭೀಮಾಶಂಕರ್, ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಮಂಜುನಾಥ ಚೌವ್ಹಾಣ್, ಉಪ ಅರಣ್ಯ ಸಂರಕ್ಷಣಾಧಿಕಾರಿ ಮರಿಯಾ ಕ್ರಿಸ್ತುರಾಜ್ ಮತ್ತಿತರರರು ಪಾಲ್ಗೊಂಡಿದ್ದರು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read