ಶಿವಮೊಗ್ಗ: ರಾಜ್ಯದ ಅತಿ ದೊಡ್ಡ ಜಾತ್ರೆಗಳಲ್ಲಿ ಒಂದಾದ ಸಾಗರದ ಮಾರಿಕಾಂಬಾ ದೇವಿ ಜಾತ್ರೆ ಫೆಬ್ರವರಿ 3ರಿಂದ 11ರವರೆಗೆ ನಡೆಯಲಿದೆ. ಇಂದಿನಿಂದ ಜಾತ್ರೆ ತಯಾರಿಗೆ ಚಾಲನೆ ನೀಡಲಾಗಿದೆ.
ಮಾರಿಕಾಂಬ ದೇವಾಲಯದ ಗಂಡನ ಮನೆ ದೇವಸ್ಥಾನದ ಎದುರು ದೇವಿ ಜಾತ್ರೆ ಹಿನ್ನೆಲೆಯಲ್ಲಿ ಬಣ್ಣ ಬಳಿಯುವ ಶಾಸ್ತ್ರಕ್ಕೆ ಚಾಲನೆ ನೀಡಲಾಗಿದೆ. ಈ ವೇಳೆ ಮಾತನಾಡಿದ ಮಾರಿಕಾಂಬಾದೇವಿ ನ್ಯಾಸ ಪ್ರತಿಷ್ಠಾನದ ಅಧ್ಯಕ್ಷ ಕೆ.ಎನ್. ನಾಗೇಂದ್ರ, ಮಾರಿಕಾಂಬಾದೇವಿ ಜಾತ್ರೆಗೆ ಸಂಬಂಧಿಸಿದಂತೆ ಶಾಸಕರ ನೇತೃತ್ವದಲ್ಲಿ ಪೂರ್ವಭಾವಿ ಸಭೆ ನಡೆಸಲಾಗಿದೆ. ಬಣ್ಣ ಬಳಿಯುವುದು ಸೇರಿದಂತೆ ಕೆಲವು ಅಗತ್ಯ ಟೆಂಡರ್ ಕರೆದು ಪೂರ್ವಭಾವಿ ಸಿದ್ಧತೆ ಕೈಗೊಳ್ಳಲಾಗಿದೆ. ಡಿಸೆಂಬರ್ 23 ರಂದು ಮರ ಕಡಿಯುವ ಶಾಸ್ತ್ರ ಇದೆ. ಜನವರಿ 27ರಂದು ಅಂಕೆ ಹಾಕಲಾಗುವುದು. ಫೆಬ್ರವರಿ 3ರಿಂದ 11ರವರೆಗೆ ಜಾತ್ರೆ ನಡೆಯಲಿದ್ದು, ಯಶಸ್ವಿಗಾಗಿ ವ್ಯವಸ್ಥೆ ಮಾಡಿಕೊಳ್ಳಲಾಗುತ್ತಿದೆ. ಎಲ್ಲರೂ ಸಹಕಾರ ನೀಡಬೇಕು ಎಂದು ಮನವಿ ಮಾಡಿದ್ದಾರೆ.
ಗೋಪುರ ಸಮಿತಿ ಸಂಚಾಲಕ ಪುರುಷೋತ್ತಮ, ದೇವಸ್ಥಾನ ಸಮಿತಿ ಪ್ರಧಾನ ಕಾರ್ಯದರ್ಶಿ ಗಿರಿಧರರಾವ್, ಸುಂದರ ಸಿಂಗ್, ತಾರಾಮೂರ್ತಿ ಮೊದಲಾದವರು ಇದ್ದರು.
