ಬೆಂಗಳೂರು: ಬರದಿಂದಾಗಿ ಸಾಲ ತೀರಿಸಲಾಗದೆ ಆತ್ಮಹತ್ಯೆ ಮಾಡಿಕೊಂಡ ರೈತರ ಮಕ್ಕಳ ಶಿಕ್ಷಣ ಶುಲ್ಕವನ್ನು ಮರುಪಾವತಿಸಲಾಗುವುದು.
2025 -26ನೇ ಸಾಲಿನ ಪ್ರವೇಶ ಶುಲ್ಕ ಮರುಪಾವತಿಗೆ ಸಂಬಂಧಿಸಿದಂತೆ ವಿದ್ಯಾರ್ಥಿಗಳಿಂದ ಕಾಲೇಜು ಶಿಕ್ಷಣ ಇಲಾಖೆ ಅರ್ಜಿ ಆಹ್ವಾನಿಸಿದೆ. ಸ್ನಾತಕೋತ್ತರ ಪದವಿ ಹಂತದವರೆಗೆ ಉಚಿತ ಶಿಕ್ಷಣ, ಹಾಸ್ಟೆಲ್ ಸೌಲಭ್ಯ ಅಥವಾ ತತ್ಸಮಾನ ಶಿಕ್ಷಣ ಶುಲ್ಕ ಮತ್ತು ವಸತಿ ವೆಚ್ಚವನ್ನು ಮರುಪಾವತಿಸಲಾಗುತ್ತಿದೆ. ಅಂತಹ ಕುಟುಂಬದ ಮಕ್ಕಳು ಪ್ರವೇಶದ ಸಂದರ್ಭದಲ್ಲಿ ಪಾವತಿಸಿರುವ ಶುಲ್ಕ ವಾಪಸ್ ಪಡೆಯಲು ಅರ್ಜಿ ಸಲ್ಲಿಸಬೇಕಿದೆ.
ಕಾಲೇಜು ಶಿಕ್ಷಣ ಇಲಾಖೆ ವ್ಯಾಪ್ತಿಯ ಸರ್ಕಾರಿ, ಅನುದಾನಿತ, ಅನುದಾನ ರಹಿತ ಕಾಲೇಜುಗಳಲ್ಲಿ ವ್ಯಾಸಂಗ ಮಾಡುತ್ತಿರುವ ಮಕ್ಕಳು ಇಲಾಖೆಯ ವೆಬ್ಸೈಟ್ ನಿಂದ ಮರುಪಾವತಿ ಅರ್ಜಿ ಡೌನ್ಲೋಡ್ ಮಾಡಿಕೊಂಡು ಪ್ರಾಂಶುಪಾಲರಿಂದ ದೃಢೀಕರಿಸಿ ಅರ್ಜಿ ಸಲ್ಲಿಸಬಹುದಾಗಿದೆ. ಆತ್ಮಹತ್ಯೆ ಮಾಡಿಕೊಂಡ ರೈತರ ವಿವರಗಳ ಪ್ರತಿ ಸಲ್ಲಿಸಬೇಕು ಎಂದು ಕಾಲೇಜು ಶಿಕ್ಷಣ ಇಲಾಖೆ ಆಯುಕ್ತರು ತಿಳಿಸಿದ್ದಾರೆ.