ಬೆಂಗಳೂರು: ವೇತನ ಹೆಚ್ಚಳ, ಹಿಂಬಾಕಿ ಪಾವತಿ ಸೇರಿದಂತೆ ತಮ್ಮ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕೆಎಸ್ಆರ್ಟಿಸಿ, ಬಿಎಂಟಿಸಿ ಸೇರಿದಂತೆ ನಾಲ್ಕು ಸಾರಿಗೆ ನಿಗಮಗಳ ನೌಕರರು ಮುಷ್ಕರ ಕೈಗೊಂಡಿದ್ದು, ರಾಜ್ಯಾದ್ಯಂತ ಬಸ್ ಸಂಚಾರದಲ್ಲಿ ಭಾರಿ ವ್ಯತ್ಯಯ ಉಂಟಾಗಿದೆ.
ಸರ್ಕಾರಿ ಬಸ್ ಗಳು ಇಲ್ಲದೆ ಪ್ರಯಾಣಿಕರು, ಶಾಲಾ-ಕಾಲೇಜಿಗೆ ತೆರಳುವ ವಿದ್ಯಾರ್ಥಿಗಳು ಹಾಗೂ ಕೆಲಸಕ್ಕೆ ಹೋಗುವವರಿಗೆ ಭಾರಿ ತೊಂದರೆಯಾಗಿದ್ದು, ಪರದಾಟ ನಡೆಸಿದ್ದಾರೆ. ಬಹುತೇಕರು ಖಾಸಗಿ ವಾಹನಗಳು, ಬಸ್ ಗಳಲ್ಲಿ ತೆರಳುತ್ತಿದ್ದಾರೆ. ಇದೇ ವೇಳೆ ಖಾಸಗಿ ಬಸ್ ಗಳು ಸುಲಿಗೆಗೆ ಇಳಿದಿವೆ. ಅನೇಕ ಕಡೆಗಳಲ್ಲಿ ಖಾಸಗಿ ವಾಹನಗಳು ಮತ್ತು ಖಾಸಗಿ ಬಸ್ ಮಾಲೀಕರು ಪ್ರಯಾಣಿಕರಿಂದ ದುಪ್ಪಟ್ಟು ದರ ವಸೂಲಿ ಮಾಡತೊಡಗಿದ್ದಾರೆ ಎನ್ನುವ ದೂರುಗಳು ಕೇಳಿ ಬಂದಿವೆ.
ಗದಗ -ಮುಂಡರಗಿಗೆ 58 ರೂಪಾಯಿ ಪ್ರಯಾಣ ದರ ಇದ್ದು, ಖಾಸಗಿ ವಾಹನ ಚಾಲಕರು 100 ರೂಪಾಯಿ ವಸೂಲಿ ಮಾಡುತ್ತಿದ್ದಾರೆ. ಸಾರಿಗೆ ನೌಕರರು ಮುಷ್ಕರ ಕೈಗೊಂಡಿರುವುದರಿಂದ ಖಾಸಗಿ ವಾಹನಗಳಿಗೆ ಹಬ್ಬ ಶುರುವಾಗಿದ್ದು, ಹಲವು ಕಡೆ ಹೆಚ್ಚಿನ ದರ ವಸೂಲಿ ಮಾಡುತ್ತಿದ್ದಾರೆ ಎಂದು ಹೇಳಲಾಗಿದೆ.