ಬಳ್ಳಾರಿ: ಅತ್ಯಾಚಾರಕ್ಕೆ ಒಳಗಾಗಿದ್ದ ಬಾಲಕಿ ಮನನೊಂದು ಆತ್ಮಹತ್ಯೆ ಮಾಡಿಕೊಂಡ ಘಟನೆ ಸಂಡೂರು ತಾಲೂಕಿನ ತೋರಣಗಲ್ಲು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬುಧವಾರ ನಡೆದಿದೆ.
ಬಾಲಕಿಯ ತಾಯಿ ನೀಡಿದ ದೂರು ಆಧರಿಸಿ ಪೋಕ್ಸೊ ಪ್ರಕರಣ ದಾಖಲಿಸಿಕೊಂಡಿರುವ ತೋರಣಗಲ್ಲು ಠಾಣೆ ಪೊಲೀಸರು ಆರೋಪಿ ಸುರೇಶ್(25) ಎಂಬುವನನ್ನು ಬಂಧಿಸಿದ್ದಾರೆ.
9ನೇ ತರಗತಿ ಓದುತ್ತಿದ್ದ ಬಾಲಕಿ ಶಾಲೆಗೆ ಹೋಗುವಾಗ ಬರುವಾಗ ಆರೋಪಿ ಚುಡಾಯಿಸುತ್ತಿದ್ದ. ತನಗೆ ಆರೋಪಿ ತೊಂದರೆ ಕೊಡುತ್ತಿರುವ ಬಗ್ಗೆ ಪೋಷಕರ ಬಳಿ ಬಾಲಕಿ ತಿಳಿಸಿದ್ದಳು. ಆರೋಪಿ ಯುವಕನಿಗೆ ಬಾಲಕಿಯ ಪೋಷಕರು ಬುದ್ಧಿವಾದ ಹೇಳಿದ್ದರು. ಆದರೂ ತನ್ನ ಚಾಳಿ ಮುಂದುವರೆಸಿದ್ದ ಎನ್ನಲಾಗಿದೆ.
ಬುಧವಾರ ಬೆಳಗ್ಗೆ ಬಾಲಕಿಯ ತಂದೆ ಮದುವೆಗೆ ಹೋಗಿದ್ದು, ತಾಯಿ ಉದ್ಯೋಗ ಖಾತ್ರಿ ಕೆಲಸಕ್ಕೆ ತೆರಳಿದ್ದಾರೆ. ಈ ವೇಳೆ ಬಾಲಕಿ ಮನೆಯಲ್ಲಿ ಫ್ಯಾನ್ ಗೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಪೋಷಕರು ಮನೆಗೆ ಬಂದಾಗ ವಿಷಯ ಗೊತ್ತಾಗಿದೆ. ಮನೆಯ ಹಾಲ್ ನಲ್ಲಿದ್ದ ಟೇಬಲ್ ಮೇಲೆ ಡೆತ್ ನೋಟ್ ಸಿಕ್ಕಿದ್ದು, ಸುರೇಶ ತನ್ನ ಮಾನಭಂಗ ಮಾಡಿದ್ದು, ತನ್ನ ಸಾವಿಗೆ ಸುರೇಶನೇ ಕಾರಣ. ಆತನ ವಿರುದ್ಧ ಕ್ರಮ ಕೈಗೊಳ್ಳಿ ಎಂದು ಬರೆದಿದ್ದಾಳೆ ಎನ್ನಲಾಗಿದೆ. ಪೊಲೀಸರು ಆರೋಪಿಯನ್ನು ಬಂಧಿಸಿ ತನಿಖೆ ಕೈಗೊಂಡಿದ್ದಾರೆ.