ಕೆದಕಿದಷ್ಟು ಬಯಲಾಗುತ್ತಿದೆ ನಟಿ ರನ್ಯಾ ರಾವ್ ಗೋಲ್ಡ್ ಸ್ಮಗ್ಲಿಂಗ್ ಕಹಾನಿ: 3 ತಿಂಗಳ ಹಿಂದಷ್ಟೇ ಖ್ಯಾತ ಆರ್ಕಿಟೆಕ್ಟ್ ಜೊತೆ ವಿವಾಹ: 15 ದಿನಗಳಲ್ಲಿ 4 ಬಾರಿ ಗಲ್ಫ್ ದೇಶಕ್ಕೆ ಭೇಟಿ

ಬೆಂಗಳೂರು: ಗೋಲ್ಡ್ ಸ್ಮಗ್ಲಿಂಗ್ ಪ್ರಕರಣದಲ್ಲಿ ಸಿಲುಕಿಕೊಂಡಿರುವ ನಟಿ ರನ್ಯಾ ರಾವ್ ಕಹಾನಿ ಕೆದಕಿದಷ್ಟು ಬಯಲಾಗುತ್ತಿದೆ. ಹಿರಿಯ ಪೊಲೀಸ್ ಅಧಿಕಾರಿಯ ಪುತ್ರಿಯಾಗಿರುವ ನಟಿ ರನ್ಯಾ ರಾವ್ ಅಕ್ರಮ ಚಿನ್ನ ಸಾಗಾಟ ಪ್ರಕರಣದಲ್ಲಿ ಜೈಲು ಸೇರಿದ್ದಾರೆ.

14.20 ಕೆಜಿ ಚಿನ್ನ ಕಳ್ಳ ಸಾಗಣೆ ಮಾಡಿರುವ ಆರೋಪದಲ್ಲಿ ಬಂಧನಕ್ಕೀಡಾಗಿ ನಟಿ ರನ್ಯಾ ರಾವ್ ಜೈಲು ಸೇರಿದ್ದಾರೆ. ಪ್ರಕರಣದ ತನಿಖೆ ಮುಂದುವರೆಸಿರುವ ಡಿಆರ್ ಐ ಅಧಿಕಾರಿಗಳು ಆಕೆಯ ಮನೆಯ ಮೇಲೆ ದಾಳಿ ನಡೆಸಿದ್ದಾರೆ. ಬೆಂಗಳೂರಿನ ಲ್ಯಾವೆಲ್ಲಿ ರಸ್ತೆಯ ನಂದವಾಣಿ ಮ್ಯಾನ್ಶನ್ ಫ್ಲಾಟ್ ನಲ್ಲಿರುವ ರನ್ಯಾ ಮನೆ ಮೇಲೆ ದಾಳಿ ನಡೆಸಲಾಗಿದ್ದು, ಈ ವೇಳೆ 2.6 ಕೆಜಿ ಚಿನ್ನ ಹಾಗೂ 2.67 ಕೋಟಿ ನಗದು ಹಣ ಪತ್ತೆಯಾಗಿದೆ. ಒಟ್ಟು 17 ಕೆಜಿಗೂ ಅಧಿಕ ಅಕ್ರಮ ಚಿನ್ನ ಸೀಜ್ ಮಾಡಲಾಗಿದೆ ಎಂದು ತಿಳಿದುಬಂದಿದೆ.

ಇನ್ನು ರನ್ಯಾ ರಾವ್ ಮೂರು ತಿಂಗಳ ಹಿಂದಷ್ಟೇ ಪ್ರಸಿದ್ಧ ರಾಜಕಾರಣಿ ಕುಟುಂಬದ ಹುಡುಗ, ಖ್ಯಾತ ಆರ್ಕಿಟೆಕ್ಟ್ ಓರ್ವರನ್ನು ವಿವಾಹವಾಗಿದ್ದು, ತಾಜ್ ವೆಸ್ಟ್ ಎಂಡ್  ನಲ್ಲಿ ಅದ್ದೂರಿ ವಿವಾಹ ಕಾರ್ಯಕ್ರಮ ನೆರವೇರಿತ್ತು. ಮದುವೆ ಬಳಿಕವೂ ರನ್ಯಾ ರಾವ್ ಗೋಲ್ಡ್ ಸ್ಮಗ್ಲಿಂಗ್ ನಲ್ಲಿ ಭಾಗಿಯಾಗಿದ್ದಾರೆ ಎನ್ನಲಾಗಿದೆ.

ರನ್ಯಾ ರಾವ್ ಕಳೆದ 15 ದಿನಗಳಲ್ಲಿ 4 ಬಾರಿ ಗಲ್ಫ್ ದೇಶಗಳಿಗೆ ಭೇಟಿ ನೀಡಿದ್ದರು. ಪ್ರತಿಬಾರಿ ವಿಮಾನ ನಿಲ್ದಾಣಕ್ಕೆ ಹೋದಾಗಲೂ ಹಿರಿಯ ಅಧಿಕಾರಿಗಳು ಬಳಸುವ ಆಫಿಷಿಯಲ್ ಪ್ರೋಟೋಕಾಲ್ ಸರ್ವಿಸ್ ಬಳಸಿ ಸೆಕ್ಯುರಿಟಿ ಚೆಕ್ ನಿಂದ ತಪ್ಪಿಸಿಕೊಳ್ಳುತ್ತಿದ್ದರು. ಪ್ರತಿಬಾರಿ ಚಿನ್ನ ಕಳ್ಳಸಾಗಣೆ ಮಾಡುವಾಗಲೂ ಒಂದೇ ರೀತಿಯ ಬಟ್ಟೆ ಧರಿಸುತ್ತಿದ್ದರು ಎನ್ನಲಾಗಿದೆ. ಬೆಲ್ಟ್ ಒಳಗೆ ಚಿನ್ನದ ಗಟ್ಟಿಗಳನ್ನು ಇಟ್ಟು, ಬೆಲ್ಟ್ ಹೊರಗೆ ಕಾಣದಂತೆ ಬಟ್ಟೆ ಹಾಕುತ್ತಿದ್ದರು. ರನ್ಯಾ ಅವರ ಬಗ್ಗೆ ದೆಹಲಿಯಲ್ಲಿ ಡಿಆರ್ ಐ ಅಧಿಕಾರಿಗಳಿಗೆ ಅನುಮಾನ ಬಂದಿದ್ದು, ಅವರು ಕೆಂಪೇಗೌಡ ಏರ್ ಪೋರ್ಟ್ ಗೆ ರನ್ಯಾ ಬರುವ ಮೊದಲೇ ಬಂದು ಕಾದು ಕುಳಿತಿದ್ದರು. ರನ್ಯಾ ಬರುತ್ತಿದ್ದಂತೆ ತಪಾಸಣೆ ನಡೆಸಿದಾಗ ಚಿನ್ನದ ಸಮೇತ ರನ್ಯಾ ಸಿಕ್ಕಿಬಿದ್ದಿದ್ದಾರೆ.

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read