ಬೆಂಗಳೂರು: ನಟ ದರ್ಶನ್ ಫ್ಯಾನ್ಸ್ ಹೆಸರಲ್ಲಿ ನಟಿ ರಮ್ಯಾ ಅವರಿಗೆ ಅಶ್ಲೀಲ ಮೆಸೇಜ್ ಕಳುಹಿಸುತ್ತಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯ ಮಹಿಳಾ ಆಯೋಗ ರಮ್ಯಾ ಪರ ನಿಂತಿದೆ. ಸ್ವಯಂಪ್ರೇರಿತ ದೂರು ದಾಖಲಿಸಿಕೊಳ್ಳಲು ಮುಂದಾಗಿದೆ.
ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ.ನಾಗಲಕ್ಷ್ಮೀ ಚೌಧರಿ, ನಟಿ ರಮ್ಯಾ ಅವರಿಗೆ ಅಶ್ಲೀಲ ಮೆಸೇಜ್ ಕಳುಹಿಸುತ್ತಿರುವವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಹಾಗೂ ಮೆಸೇಜ್ ಗಳನ್ನು ಬ್ಲಾಕ್ ಮಾಡುವಂತೆ ಪೊಲೀಸ್ ಆಯುಕ್ತರಿಗೆ ಪತ್ರ ಬರೆಯಲಾಗಿದೆ. ಈ ಬಗ್ಗೆ ವರದಿ ನೀಡುವಂತೆಯೂ ಸೂಚಿಸಲಾಗಿದೆ ಎಂದು ಹೇಳಿದರು.
ನಟಿ ರಮ್ಯಾ ದೂರು ದಾಖಲಿಸಿದರೆ ತಪ್ಪಿತಸ್ಥರಿಗೆ 3-7 ವರ್ಷ ಜೈಲು ಶಿಕ್ಷೆಯಾಗಲಿದೆ. ಇದು ನಟಿ ರಮ್ಯಾ ಅಂತಾ ಅಲ್ಲ, ಯಾವುದೇ ಹೆಣ್ಣುಮಕ್ಕಳಿಗೆ ಸೋಷಿಯಲ್ ಮೀಡಿಯಾಗಳಲ್ಲಿ, ಅಥವಾ ಎಲ್ಲಿಯೇ ಆಗಲಿ ಕೆಟ್ಟ ಪದಬಳಕೆ, ಕೆಟ್ಟ ಮಾತುಗಳನ್ನಾಡಿದರೆ ಅಂತವರ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುವುದು. ಯಾವ ಮಹಿಳೆಯರಿಗೂ ಅಗೌರವತೋರುವಂತಿಲ್ಲ. ಸೋಷಿಯಲ್ ಮೀಡಿಯಾಗಳಲ್ಲಿ ಕೆಟ್ಟದಾಗಿ ಕಮೆಂಟ್ ಹಾಕುವ ಮುನ್ನ ನಿಮ್ಮ ಭವಿಷ್ಯದ ಬಗ್ಗೆ ಯೋಚಿಸಿ. ನೀವು ಹಾಕುವ ಅಶ್ಲೀಲ ಕಮೆಂಟ್, ಪದ ಬಳಕೆ ಮುಂದೆ ನಿಮ್ಮನ್ನು ಜೈಲುಗೂ ಕಳುಹಿಸಬಹುದು. ಅಶ್ಲೀಲ ಪದ ಬಳಕೆ, ಮೆಸೇಜ್ ಗಳ ಬಗ್ಗೆ ತಪ್ಪಿತಸ್ಥರ ವಿರುದ್ಧ ಕ್ರಮವಾದರೆ 3-7 ವರ್ಷ ಜೈಲು ಶಿಕ್ಷೆಯಾಗಲಿದೆ ಎಂದು ನಾಗಲಕ್ಷ್ಮೀ ಎಚ್ಚರಿಕೆ ನೀಡಿದ್ದಾರೆ.