ಬೆಂಗಳೂರು: ಬೆಂಗಳೂರಿನ ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟ ಪ್ರಕರಣದ ಬಾಂಬರ್ ಹಾಗೂ ಮಾಸ್ಟರ್ ಮೈಂಡ್ ಇಬ್ಬರನ್ನು ರಾಷ್ಟ್ರೀಯ ತನಿಖಾ ದಳದ ಅಧಿಕಾರಿಗಳು ಬಂಧಿಸಿದ್ದಾರೆ.
ಪಶ್ಚಿಮ ಬಂಗಾಳದಲ್ಲಿ ಬಾಂಬರ್ ಮುಸ್ಸಾವೀರ್ ಹುಸೇನ್ ಶಾಜಿಬ್ ಹಾಗೂ ಸ್ಫೋಟದ ಮಾಸ್ಟರ್ ಮೈಂಡ್ ಅಬ್ದುಲ್ ಮತೀನ್ ತಾಹಾನನ್ನು ಬಂಧಿಸಿದ್ದು, ಬೆಂಗಳೂರಿಗೆ ಕರೆ ತರಲಾಗಿದೆ. ಇಂದು ನ್ಯಾಯಾಲಯಲಕ್ಕೆ ಹಾಜರುಪಡಿಸಲಾಗುತ್ತಿದೆ.
ಬಂಧಿತ ಉಗ್ರರು ಹಿಂದೂ ಹೆಸರು ಇಟ್ಟುಕೊಂಡು ಓಡಾಡುತ್ತಿದ್ದರು. ಅಲ್ಲದೇ ಇಬ್ಬರ ಬಳಿಯೂ ರಾಜ್ಯದ ಇಬ್ಬರ ನಕಲಿ ಆಧಾರ್ ಕಾರ್ಡ್ ಗಳು ಪತ್ತೆಯಾಗಿವೆ.
ಬಂಧಿತ ಉಗ್ರರ ಬಳಿ ಕಲಬುರ್ಗಿಯ ವರ್ದಾನಗರದ ನಿವಾಸಿ ಅನಮೂಲ ಕುಲಕರ್ಣಿ ಎಂಬ ಯುವಕನ ನಕಲಿ ಆಧಾರ್ ಕಾರ್ಡ್ ಪತ್ತೆಯಾಗಿದೆ. ವೃತ್ತಿಯಲ್ಲಿ ಟೆಕ್ಕಿಯಾಗಿರುವ ಅನಮೂಲ ಕುಲಕರ್ಣಿ ಬೆಂಗಳೂರಿನ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದಾರೆ ಎಂದು ತಿಳಿದುಬಂದಿದೆ. ಉಗ್ರರಿಗೆ ಅನಮೂಲ ಕುಲಕರ್ಣಿ ಆಧಾರ್ ಕಾರ್ಡ್ ಸಿಕ್ಕಿದ್ದು ಹೇಗೆ? ಎಂಬುದನ್ನು ತನಿಖೆ ನಡೆಸಲಾಗುತ್ತಿದೆ. ಅಲ್ಲದೇ ಇನ್ನೋರ್ವ ವ್ಯಕ್ತಿ ವಿಘ್ನೇಶ್ ಎಂಬುವವರ ನಕಲಿ ಆಧಾರ್ ಕಾರ್ಡ್ ಕೂಡ ಉಗ್ರರ ಬಳಿ ಸಿಕ್ಕಿದೆ ಎನ್ನಲಾಗಿದೆ.
ಕಳೆದ 12 ದಿನಗಳಿಂದ ಕೊಲ್ಕತ್ತಾದಲ್ಲಿ ತಲೆಮರೆಸಿಕೊಂಡಿದ್ದ ಉಗ್ರರು, ಕೋಲ್ಕತ್ತಾದ ಮಿದಿಲಾಪುರದ ಹಲವು ಲಾಡ್ಜ್ ಗಳಲ್ಲಿ ತಂಗಿದ್ದರು. ಪ್ರತಿ 2-3 ದಿನಕ್ಕೆ ಸ್ಥಳ ಬದಲಿಸುತ್ತಿದ್ದರು. ಉಗ್ರರು ಸಂಜಯ್ ಅಗರ್ವಾಲ್, ಉದಯ್ ದಾಸ್, ಯಶು ಪಟೇಲ್, ವಿಘೇಶ್ ಎಂದು ಹೆಸರನ್ನು ಬದಲಿಸಿಕೊಂಡು ಓಡಾಡುತ್ತಿದ್ದರು. ಉಗ್ರರು ಹೊಟೆಲ್ ನಲ್ಲಿ ಜಾರ್ಖಂಡ್ ಹಾಗೂ ತ್ರಿಪುರಾ ಮೂಲದವರೆಂದು ಹೇಳುತ್ತಿದ್ದರು ಎಂದು ತಿಳಿದುಬಂದಿದೆ.

 
			 
		 
		 
		 
		 Loading ...
 Loading ... 
		 
		 
		