ಬೆಳಗಾವಿ: ಮಾಜಿ ಸಚಿವ, ಗೋಕಾಕ್ ಶಾಸಕ ರಮೇಶ್ ಜಾರಕಿಹೊಳಿ ಹಾಗೂ ಅಥಣಿ ಶಾಸಕ ಲಕ್ಷ್ಮಣ ಸವದಿ ನಡುವೆ ಟಾಕ್ ಫೈಟ್ ತಾರಕಕ್ಕೇರಿದೆ. ಯಾವುದೋ ಕಾರಣಕ್ಕೆ ನಾನು ಕಾಂಗ್ರೆಸ್ ತೊರೆದು ಬಿಜೆಪಿಗೆ ಸೇರಿದಾಗ ಲಕ್ಷ್ಮಣ ಸವದಿಗೆ ಹೆಚ್ಚಿನ ಲಾಭವಾಯಿತು. ಸವದಿ ಬಿಜೆಪಿ ತೊರೆದು ಕಾಂಗ್ರೆಸ್ ಸೇರಿದ್ದರಿಂದ ಬಿಜೆಪಿಯಿಂದ ಪೀಡೆ ಹೋದಂತಾಯಿತು ಎಂದು ರಮೇಶ್ ಜಾರಕಿಹೊಳಿ ವಾಗ್ದಾಳಿ ನಡೆಸಿದ್ದಾರೆ.
ಬೆಳಗಾವಿಯ ಅಥಣಿಯಲ್ಲಿ ಮಾತನಾಡಿದ ರಮೇಶ್ ಜಾರಕಿಹೊಳಿ, ಸವದಿಗೆ ಕಾಂಗ್ರೆಸ್ ನಲ್ಲಿ ಐದು ವರ್ಷ ಶಾಸಕನಾಗಿ ಕೆಲಸ ಮಾಡುವ ಅವಕಾಶವಷ್ಟೇ. ಆದರೆ ಬಿಜೆಪಿಯಲ್ಲಿ ಸವದಿ ಇದ್ದಿದ್ದರೆ ರಾಜ್ಯದಲ್ಲಿ ಅತಿ ದೊಡ್ಡ ಲೀಡರ್ ಆಗುತ್ತಿದ್ದ. ಬಿಜೆಪಿ ಬಿಟ್ಟು ತನ್ನ ವ್ಯಕ್ತಿತ್ವ ಹಾಳುಮಾಡಿಕೊಂಡ ಎಂದಿದ್ದಾರೆ.
ಒಂದು ರೀತಿ ಸವದಿ ಬಿಜೆಪಿ ಬಿಟ್ಟಿದ್ದು ಒಳ್ಳೆಯದಾಯಿತು. ಇನ್ಮುಂದೆ ಸವದಿ ಮತ್ತೆ ಬಿಜೆಪಿಗೆ ಬರಲು ನಾವು ಆಸ್ಪದ ಕೊಡಲ್ಲ ಎಂದು ಹೇಳಿದ್ದಾರೆ. ಸವದಿ ಬಿಜೆಪಿಗೆ ಮತ್ತೆ ಬರುತ್ತಾರೆ ಎಂದರೆ ಅವನನ್ನು ಎಲ್ಲಿ ತಡೆಯಬೇಕೋ ಅಲ್ಲಿ ತಡೆಯುತ್ತೇವೆ. ಆ ಶಕ್ತಿ ನಮ್ಮಲ್ಲಿದೆ. ಇದನ್ನು ಮೀರಿ ಆತ ಪಕ್ಷಕ್ಕೆ ಮರಳಿ ಬಂದರೆ ಮುಂದೆ ದೇವರಿದ್ದಾನೆ ಎಂದು ಹೇಳಿಕೆ ನೀಡಿದ್ದಾರೆ.