ಬೆಂಗಳೂರು: ಸೈಬರ್ ವಂಚಕರ ಬಗ್ಗೆ ಎಷ್ಟೇ ಎಚ್ಚರವಹಿಸಿದರೂ ಕಡಿಮೆಯೇ. ನಟ ಉಪೇಂದ್ರ, ಪತ್ನಿ ಪ್ರಿಯಾಂಕಾ ಉಪೇಂದ್ರ ಅವರಿಗೆ ಸೈಬರ್ ವಂಚಕರು ವಂಚಿಸಿದ್ದ ಪ್ರಕರಣ ಬೆನ್ನಲ್ಲೇ ಇದೀಗ ಖ್ಯಾತ ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು ಅವರಿಗೆ ಸೈಬರ್ ವಂಚಕರು ವಂಚಿಸಿರುವ ಘಟನೆ ನಡೆದಿದೆ. ಸಿನಿಮಾ ಡಬ್ಬಿಂಗ್ ಹೆಸರಲ್ಲಿ ಬರೋಬ್ಬರಿ 4.25 ಲಕ್ಷ ರೂಪಾಯಿ ಹಣವನ್ನು ಖಾತೆಯಿಂದ ವರ್ಗಾಯಿಸಿಕೊಂಡು ಎಸ್ಕೇಪ್ ಆಗಿದ್ದಾರೆ.
‘ರಕ್ತ ಕಾಶ್ಮೀರ’ ಸಿನಿಮಾ ಡಬ್ಬಿಂಗ್ ನೆಪದಲ್ಲಿ ನಿರ್ದೇಶಗ ರಾಜೇಂದ್ರ ಸಿಂಗ್ ಬಾಬು ಅವರ ಆಧಾರ್ ಸಂಖ್ಯೆ, ದಾಖಲೆಗಳ ವಿವರವನ್ನು ಪಡೆದ ಸೈಬರ್ ವಂಚಕರು ಅವರ ಖಾತೆಯಿಂದ ಲಕ್ಷ ಲಕ್ಷ ಹಣ ದೋಚಿದ್ದಾರೆ.
ರಕ್ತ ಕಾಶ್ಮೀರ ಸಿನಿಮಾವನ್ನು ತೆಲುಗು ಭಾಷೆಗೆ ಡಬ್ಬಿಂಗ ಮಾಡುವ ಆಮಿಷವೊಡ್ಡಿದ್ದಾರೆ. ಅಲ್ಲದೇ ಡಬ್ಬಿಂಗ್ ಮಾಡುವುದಾಗಿ ಹೇಳಿ ನಿರ್ದೇಶಕರಿಂದ ಆಧಾರ್ ಕಾರ್ಡ್, ಪ್ಯಾನ್ ಕಾರ್ಡ್ ಮತ್ತಿತರ ದಾಖಲೆಗಳನ್ನು ಪಡೆದುಕೊಂಡಿದ್ದಾರೆ. ಬಳಿಕ ರಾಜೇಂದ್ರ ಸಿಂಗ್ ಬಾಬು ದಾಖಲೆಗಳನ್ನು ಪಡೆದು 4.25 ಲಕ್ಷ ಹಣವನ್ನು ಅವರ ಅಕೌಂಟ್ ನಿಂದ ವರ್ಗಾಯಿಸಿಕೊಂಡಿದ್ದಾರೆ. ವಂಚನೆ ಬೆನ್ನಲ್ಲೇ ರಾಜೇಂದ್ರ ಸಿಂಗ್ ಬಾಬು ಸೈಬರ್ ಕ್ರೈಂ ಗೆ ದೂರು ನೀಡಿದ್ದಾರೆ.