ಜೈಪುರ: ರಾಜಸ್ಥಾನದ ಜೈಪುರ ಜಿಲ್ಲೆಯ ಜಾಮ್ವಾ ರಾಮಗಢ ಪಟ್ಟಣದಲ್ಲಿ ಭಾನುವಾರ ಟ್ರಕ್ ಗೆ ಕಾರ್ ಡಿಕ್ಕಿ ಹೊಡೆದ ಪರಿಣಾಮ ಉತ್ತರ ಪ್ರದೇಶದ ಇಬ್ಬರು ಮಹಿಳೆಯರು ಮತ್ತು ಆರು ತಿಂಗಳ ಹೆಣ್ಣು ಮಗು ಸೇರಿದಂತೆ ಒಂದೇ ಕುಟುಂಬದ ಐವರು ಸದಸ್ಯರು ಸಾವನ್ನಪ್ಪಿದ್ದಾರೆ.
ಪ್ರಾರ್ಥನೆ ಸಲ್ಲಿಸಲು ಕುಟುಂಬವು ಖಾತು ಶ್ಯಾಮ್ ದೇವಸ್ಥಾನಕ್ಕೆ ತೆರಳುತ್ತಿದ್ದಾಗ ಅಪಘಾತ ಸಂಭವಿಸಿದೆ.
ರೈಸರ್ SHO ರಘುವೀರ್ ಸಿಂಗ್ ಮಾತನಾಡಿ, ದೌಸಾ-ಮನೋಹರಪುರ ರಾಷ್ಟ್ರೀಯ ಹೆದ್ದಾರಿಯ ನೆಕಾವಾಲಾ ಟೋಲ್ ಪ್ಲಾಜಾ ಬಳಿ ಅಪಘಾತ ಸಂಭವಿಸಿದೆ ಎಂದು ತಿಳಿಸಿದ್ದಾರೆ.
ಕಾರ್ ಮತ್ತು ಟ್ರಕ್ ನಡುವಿನ ಡಿಕ್ಕಿಯ ಪರಿಣಾಮ ಟ್ರಕ್ ರಸ್ತೆಯಿಂದ ಹೊರಕ್ಕೆ ಉರುಳಿ ಬಿದ್ದಿದೆ. ಕಾರ್ ನಿಂದ ಶವಗಳನ್ನು ಹೊರತೆಗೆಯಲು ಪೊಲೀಸರು ಹರಸಾಹಸ ನಡಸಬೇಕಾಯಿತು. ಅಪಘಾತದಿಂದಾಗಿ ಹೆದ್ದಾರಿಯಲ್ಲಿ ಭಾರಿ ಟ್ರಾಫಿಕ್ ಜಾಮ್ ಉಂಟಾಗಿ, ವಾಹನಗಳು ಸಾಕಷ್ಟು ಹೊತ್ತು ನಿಂತಿದ್ದವು.
ಉತ್ತರ ಪ್ರದೇಶದ ಲಕ್ನೋದ ಕುಟುಂಬದವರು ಪ್ರಸಿದ್ಧ ಖಾತು ಶ್ಯಾಮ್ ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸಲು ಹೋಗುತ್ತಿದ್ದರು. ಶವಗಳನ್ನು ನಿಮ್ಸ್ ಆಸ್ಪತ್ರೆಯ ಶವಾಗಾರದಲ್ಲಿ ಇರಿಸಲಾಗಿದ್ದು, ಮರಣೋತ್ತರ ಪರೀಕ್ಷೆಯ ನಂತರ ಸಂಬಂಧಿಕರಿಗೆ ಹಸ್ತಾಂತರಿಸಲಾಗುವುದು ಎಂದು ರಘುವೀರ್ ಸಿಂಗ್ ಹೇಳಿದ್ದಾರೆ.
ಕಾರ್ ಮತ್ತು ಟ್ರಕ್ ನಡುವಿನ ಡಿಕ್ಕಿಯ ಪರಿಣಾಮ ಕಾರಿನ ಮುಂಭಾಗ ಸಂಪೂರ್ಣವಾಗಿ ನಜ್ಜುಗುಜ್ಜಾಗಿದೆ. ಓವರ್‌ಟೇಕ್ ಮಾಡುವ ಪ್ರಯತ್ನದಲ್ಲಿ ಅಪಘಾತ ಸಂಭವಿಸಿರಬಹುದು ಎಂದು ಪ್ರಾಥಮಿಕ ತನಿಖೆಯಲ್ಲಿ ಗೊತ್ತಾಗಿದೆ. ಆದರೂ ನಿಖರವಾದ ಕಾರಣ ತಿಳಿಯಲು ಇನ್ನೂ ಹೆಚ್ಚಿನ ತನಿಖೆ ಮುಂದುವರೆದಿದೆ ಎಂದು ತಿಳಿಸಿದ್ದಾರೆ.