ಸವಾಯಿ ಮಾಧೋಪುರದಲ್ಲಿ ಅಂಬೇಡ್ಕರ್ ಪ್ರತಿಮೆ ಬಳಿ ನಾಮಫಲಕ ತೆಗೆದಿದ್ದಕ್ಕೆ ವಿವಾದ ಭುಗಿಲೆದ್ದಿದೆ. ಕಾಂಗ್ರೆಸ್ ಶಾಸಕಿ ಇಂದಿರಾ ಮೀನಾ ಅವರು ಬಿಜೆಪಿ ನಾಯಕ ಹನುಮಾನ್ ದೀಕ್ಷಿತ್ ಅವರ ಕಾಲರ್ ಹಿಡಿದು ತರಾಟೆಗೆ ತೆಗೆದುಕೊಂಡಿದ್ದಾರೆ.
ಈ ಘಟನೆ ಭಾನುವಾರ ರಾತ್ರಿ ಬೋಲಿ ಪಟ್ಟಣದ ಅಂಬೇಡ್ಕರ್ ಚೌಕ್‌ನಲ್ಲಿ ನಡೆದಿದೆ. ಅಂಬೇಡ್ಕರ್ ಪ್ರತಿಮೆಯ ಪೀಠದಿಂದ ತಮ್ಮ ಹೆಸರಿನ ನಾಮಫಲಕವನ್ನು ತೆಗೆದುಹಾಕಿರುವುದನ್ನು ಗಮನಿಸಿದ ಮೀನಾ, ಅಲ್ಲಿದ್ದ ಬಿಜೆಪಿ ನಾಯಕರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಈ ವೇಳೆ, ಬಿಜೆಪಿ ಮಂಡಲ ಅಧ್ಯಕ್ಷ ಹನುಮಾನ್ ದೀಕ್ಷಿತ್ ಅವರ ಕಾಲರ್ ಹಿಡಿದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಪೊಲೀಸರು ಮಧ್ಯಪ್ರವೇಶಿಸಿ ಪರಿಸ್ಥಿತಿಯನ್ನು ನಿಯಂತ್ರಿಸಿದ್ದಾರೆ. ಸದ್ಯ ನಾಮಫಲಕವನ್ನು ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಇರಿಸಲಾಗಿದೆ.
ಬಿಜೆಪಿ ಜಿಲ್ಲಾಧ್ಯಕ್ಷ ಮಾನ್ ಸಿಂಗ್ ಗುರ್ಜಾರ್, ಮೀನಾ ಅವರ ಈ ವರ್ತನೆಯನ್ನು ಖಂಡಿಸಿದ್ದಾರೆ. ಉಪಮುಖ್ಯಮಂತ್ರಿ ಡಾ. ಪ್ರೇಮ್‌ಚಂದ್ ಬೈರ್ವಾ ಕೂಡ ಇಂದಿರಾ ಮೀನಾ ಅವರ ನಡವಳಿಕೆಯನ್ನು ಟೀಕಿಸಿದ್ದಾರೆ. “ಅಂಬೇಡ್ಕರ್ ಜಯಂತಿಯ ಸಂದರ್ಭದಲ್ಲಿ ಸಾಮಾಜಿಕ ಸಾಮರಸ್ಯದ ಸಂದೇಶವನ್ನು ಕಳುಹಿಸಬೇಕು. ಪ್ರತಿಯೊಬ್ಬ ವ್ಯಕ್ತಿಯೂ ಡಾ. ಅಂಬೇಡ್ಕರ್ ಅವರ ಘನತೆಯನ್ನು ಗೌರವಿಸಬೇಕು” ಎಂದು ಅವರು ಹೇಳಿದ್ದಾರೆ.

