ರಾಯಚೂರು: ರಾಜ್ಯದ ಹಲವು ಜಿಲ್ಲೆಗಳಲ್ಲಿ ಭಾರಿ ಮಳೆಯಾಗುತ್ತಿದ್ದು, ಅವಾಂತರಗಳು ಸೃಷ್ಟಿಯಾಗಿವೆ. ರಾಯಚೂರು ಜಿಲ್ಲೆಯಲ್ಲಿಯೂ ಧಾರಾಕಾರ ಮಳೆಯಾಗುತ್ತಿದ್ದು, ನಾಲ್ಕು ಅಂತಸ್ತಿನ ಕಟ್ಟಡವೇ ಕುಸಿದಿರುವ ಘಟನೆ ನಡೆದಿದೆ.
ರಾಯಚೂರು ನಗರದ ನವರಂಗ್ ದರ್ವಾಜ್ ರಸ್ತೆಯಲ್ಲಿರುವ ನಾಲ್ಕು ಅಂತಸ್ತಿನ ಕಟ್ಟಡದ ಪಾಯ ಕುಸಿದು ಕಟ್ಟಡ ಪಕ್ಕದ ಕಟ್ಟಡದ ಮೇಲೆ ವಾಲಿದೆ.
ಸಿವಿಲ್ ಇಂಜಿನಿಯರ್ ಮಹಮ್ಮದ್ ದಸ್ತಗೀರ್ ಎಂಬುವವರ ಕಟ್ಟಡ ಇದಾಗಿದ್ದು, ಧಾರಾಕಾರ ಮಳೆಯಿಂದಾಗಿ ಕಟ್ಟಡ ಕುಸಿದು ಒಅಕ್ಕದ ಕಟ್ಟಡದ ಮೇಲೆ ವಾಲಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.
ಸುಮಾರು 14 ವರ್ಷಗಳ ಹಿಂದೆ ನಿರ್ಮಾಣವಾಗಿದ್ದ ಕಟ್ಟಡ ಇದಾಗಿದೆ. ಈಗ ಭಾರಿ ಮಳೆಯಿಂದಾಗಿ ಕಟ್ಟಡದ ಬುನಾದಿಯೇ ಕುಸಿದು ಈ ಅವಾಂತರ ಸಂಭವಿಸಿದೆ. ಸಣ್ಣ ಜಾಗದಲ್ಲಿಯೇ ನಾಲ್ಕು ಅಂತಸ್ತಿನ ನಿರ್ಮಾಣ ಮಾಡಲಾಗಿದ್ದು, ರಸ್ತೆ ಪಕ್ಕದಲ್ಲಿಯೇ ಇರುವ ಕಟ್ಟಡ ವಾಲಿದ್ದರಿಂದ ಸಾರ್ವಜನಿಕರಿಗೆ ಹಾಗೂ ಪಕ್ಕನ ಮನೆಯವರಿಗೂ ಆತಂಕ ಎದುರಾಗಿದೆ.