ರಾಯಚೂರು: ಪಿಸ್ತೂಲಿನಿಂದ ಆಕಸ್ಮಿಕವಾಗಿ ಗುಂಡು ಹಾರಿ ಬಾಲಕ ಗಂಭೀರವಾಗಿ ಗಾಯಗೊಂಡಿರುವ ಘಟನೆ ರಾಯಚೂರು ನಗರದ ಹೆಚ್ ಆರ್ ಬಿ ಬಡಾವಣೆಯಲ್ಲಿ ನಡೆದಿದೆ.
16 ವರ್ಷದ ಮೊಹಮ್ಮದ್ ಸೋಹೆಲ್ ಗಂಭೀರವಾಗಿ ಗಾಯಗೊಂಡಿರುವ ಬಾಲಕ. ಮೇ 3ರಂದು ನಡೆದ ಘಟನೆ ತದವಾಗಿ ಬೆಳಕಿಗೆ ಬಂದಿದೆ.
ರಾಯಚೂರಿನ ಜಾಕಿರ್ ಹುಸೇನ್ ಸರ್ಕಲ್ ನಲ್ಲಿ ಮೊಹಮ್ಮದ್ ಸೋಹಿಲ್ ಹಾಗೂ ಆತನ ಸ್ನೇಹಿತ ಜಿಯಾ ಸೌದಾಗರ್ ಉಪಹಾರ ಸೇವಿಸಿ ಇಬ್ಬರೂ ಬೈಕ್ ನಲ್ಲಿ ತೆರಳಿದ್ದಾರೆ. ಜಿಯಾ ಸೌದಾಗರ್, ಸೋಹಿಲ್ ನನ್ನು ತನ್ನ ಮನೆಗೆ ಕರೆದೊಯ್ದಿದ್ದಾನೆ. ಈ ವೇಳೆ ತನ್ನ ಬಳಿ ಪಿಸ್ತೂಲ್ ಇರುವುದಾಗಿ ತೋರಿಸಿ ನಾಲ್ಕು ಬುಲೆಟ್ ತುಂಬಿ ಮಂಚದ ಮೇಲಿಟ್ಟಿದ್ದಾನೆ.
ಈ ವೇಳೆ ಆಕಸ್ಮಿಕವಾಗಿ ಪಿಸ್ತೂಲ್ ನಿಂದ ಗುಂಡು ಹಾರಿದ್ದು, ಸೋಹಿಲ್ ನ ಕಾಲಿನ ತೊಡೆಯ ಭಾಗಕ್ಕೆ ಗುಂಡು ಹೊಕ್ಕಿದೆ. ಬಲತೊಡೆಗೆ ಹೊಕ್ಕಿ ಹೊರಬಿದ್ದ ಗುಂಡು ಎಡ ತೊಡೆಗೂ ಹೊಕ್ಕಿದೆ. ತಕ್ಷಣ ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಘಟನೆ ಬಳಿಕ ಚಿಕಿತ್ಸೆ ಪಡೆಯುವಂತೆ ಸೌದಾಗರ್ ಮೂರು ಸಾವಿರ ಹಣವನ್ನು ಆನ್ ಲೈನ್ ಮೂಲಕ ಪೇ ಮಾಡಿದ್ದಾನೆ. ಈ ಬಗ್ಗೆ ಈಗ ಸದರ್ ಬಜಾರ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಗಾಯಾಳು ಹೆಚ್ಚಿನ ಚಿಕಿತ್ಸೆಗಾಗಿ ರಿಮ್ಸ್ ಆಸ್ಪತ್ರೆಗೆ ದಾಖಲಾಗಿದ್ದಾನೆ.