ಲೋಕಸಭಾ ಚುನಾವಣೆಯ ಮೊದಲ ಹಂತದ ಮತದಾನಕ್ಕೆ ಕೆಲವೇ ದಿನಗಳು ಬಾಕಿ ಉಳಿದಿದ್ದು, ಎಲ್ಲ ಪಕ್ಷಗಳ ನಾಯಕರು ತಮ್ಮ ತಮ್ಮ ಅಭ್ಯರ್ಥಿಗಳ ಪರ ಭರ್ಜರಿ ಪ್ರಚಾರ ಕಾರ್ಯ ನಡೆಸುತ್ತಿದ್ದಾರೆ. ತಮಿಳುನಾಡಿನಲ್ಲಿ I.N.D.IA ಮೈತ್ರಿಕೂಟದ ಅಭ್ಯರ್ಥಿಗಳ ಪರ ಕಾಂಗ್ರೆಸ್ ನಾಯಕ ರಾಹುಲ್ ಹಾಗೂ ತಮಿಳುನಾಡು ಮುಖ್ಯಮಂತ್ರಿ – ಡಿಎಂಕೆ ಮುಖ್ಯಸ್ಥ ಎಂ.ಕೆ. ಸ್ಟ್ಯಾಲಿನ್ ಜಂಟಿ ಪ್ರಚಾರ ಕಾರ್ಯ ನಡೆಸುತ್ತಿದ್ದಾರೆ.
ಮೈತ್ರಿಕೂಟದ ಅಭ್ಯರ್ಥಿಗಳ ಪರ ಪ್ರಚಾರಕ್ಕಾಗಿ ತಮಿಳುನಾಡಿಗೆ ತೆರಳಿದ್ದ ರಾಹುಲ್ ಗಾಂಧಿ, ಕೊಯಮತ್ತೂರಿನಲ್ಲಿ ರೋಡ್ ಶೋ ನಡೆಸಿದ್ದಾರೆ. ಇದರ ಮಧ್ಯೆ ಸ್ವಲ್ಪ ಕಾಲ ವಿರಾಮ ಪಡೆದುಕೊಂಡ ರಾಹುಲ್, ಮಾರ್ಗ ಮಧ್ಯದಲ್ಲಿ ಇದ್ದ ಸಿಹಿ ತಿನಿಸಿನ ಅಂಗಡಿಗೆ ತೆರಳಿ, ಮೈಸೂರ್ ಪಾಕ್ ಖರೀದಿಸಿದ್ದಾರೆ. ಈ ಸಂದರ್ಭದಲ್ಲಿ ಅಲ್ಲಿದ್ದ ಮಹಿಳೆ ಯಾರಿಗಾಗಿ ಇದನ್ನು ಖರೀದಿಸುತ್ತಿದ್ದೀರಿ ಎಂದಾಗ ನನ್ನ ಹಿರಿಯ ಸಹೋದರ ಸ್ಟಾಲಿನ್ ಗಾಗಿ ಎಂದು ಹೇಳಿದ್ದಾರೆ.
ಮೈಸೂರ್ ಪಾಕ್ ಖರೀದಿಸಿದ ರಾಹುಲ್ ಗಾಂಧಿ ಇದಕ್ಕೆ ಯುಪಿಐ ಬದಲಿಗೆ ಕ್ಯಾಶ್ ಮೂಲಕವೇ ಹಣ ಪಾವತಿಸಿದ್ದು, ಬಳಿಕ ಸ್ಟಾಲಿನ್ ಅವರಿಗೆ ಮೈಸೂರ್ ಪಾಕ್ ನೀಡಿದ್ದಾರೆ. ಕಾಂಗ್ರೆಸ್ ಪಕ್ಷ ತನ್ನ ಎಕ್ಸ್ ಖಾತೆಯಲ್ಲಿ ರಾಹುಲ್ ಗಾಂಧಿ, ಮೈಸೂರ್ ಪಾಕ್ ಖರೀದಿಸುತ್ತಿರುವ ವಿಡಿಯೋ ಶೇರ್ ಮಾಡಿದ್ದು, ಇದು ಈಗ ವೈರಲ್ ಆಗಿದೆ. ಚುನಾವಣಾ ಪ್ರಚಾರ ಸಂದರ್ಭದಲ್ಲಿ ಸ್ಟಾಲಿನ್, ರಾಹುಲ್ ಅವರನ್ನು ಸಹೋದರ ಎಂದೇ ಸಂಬೋಧಿಸುತ್ತಿದ್ದು, ರಾಹುಲ್ ಗಾಂಧಿ ಕೂಡ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ನನ್ನ ಹಿರಿಯ ಸಹೋದರ ಸ್ಟಾಲಿನ್ ಗೆ ಸಿಹಿ ತಿನಿಸು ನೀಡಿದೆ ಎಂದು ಬರೆದುಕೊಂಡಿದ್ದಾರೆ.
Shri @RahulGandhi gifts famous Mysore Pak to Shri @mkstalin.
Celebrating the loving relationship he shares with the people of Tamil Nadu. pic.twitter.com/Lw8vYrCC8L
— Congress (@INCIndia) April 12, 2024