ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದು ಸಂಜೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಿ ರಾಜ್ಯದ ಕಬ್ಬು ಬೆಳೆಗಾರರ ಸಮಸ್ಯೆ, ಬೆಳೆಹಾನಿ ಪರಿಹಾರ, ರಾಜ್ಯಕ್ಕೆ ಬಿಡುಗಡೆ ಮಾಡಬೇಕಿರುವ ಅನುದಾನ ವಿಚಾರವಾಗಿ ಚರ್ಚೆ ನಡೆಸಲಿದ್ದಾರೆ. ಸಿಎಂ ಸಿದ್ದರಾಮಯ್ಯ ಅವರು ಪ್ರಧಾನಿ ಮೋದಿ ಭೇಟಿಯಾಗುತ್ತಿರುವುದಕ್ಕೆ ವಿಪಕ್ಷ ನಾಯಕ ಆರ್.ಅಶೋಕ್ ಕಿಡಿಕಾರಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಆರ್.ಅಶೋಕ್, ಸಿಎಂ ಸಿದ್ದರಾಮಯ್ಯ ಅವರು ಇಂದು ಪ್ರಧಾನಿ ಮೋದ್ಯವರನ್ನು ಭೇಟಿಯಾಗುತ್ತಿರುವುದು ಕೇವಲ ರಾಜಕೀಯ ನಾಟಕವಷ್ಟೇ. ಇಂತಹ ನಾಟಕ ಮಾಡುವುದರಲ್ಲಿ ಸಿದ್ದರಾಮಯ್ಯ ನಿಸ್ಸೀಮರು ಎಂದಿದ್ದಾರೆ.
ಪ್ರಧಾನಿ ಮೋದಿಯವರು ಜಿಎಸ್ ಟಿ ಸಲಹಾ ಮಂಡಳಿ ಸಭೆ ಕರೆದಾಗ ಸಿಎಂಸಿದ್ದರಾಮಯ್ಯ ಹೋಗಿಲ್ಲ. ಅಂದು ಸಭೆ ಕರೆದಾಗ ಹೋಗದೇ ಈಗ್ಯಾಕೆ ಹೋಗುತ್ತಿದ್ದಾರೆ. ಈಗ ಪ್ರತ್ಯೇಕವಾಗಿ ಪ್ರಧಾನಿ ಭೇಟಿ ಮಾಡಿ ಅನುದಾನಕ್ಕೆ ಮನವಿ ಎಂಬುದು ರಾಜಕೀಯ ಡ್ರಾಮಾ. ಅಂದು ಜಿಎಸ್ ಟಿ ಸಭೆ ಹೋದಾಗ ಅಲ್ಲಿ ರಾಜ್ಯಕ್ಕೆ ಬರಬೇಕಿರುವ ಅನುದಾನ ಸಂಪೂರ್ಣ ಬಿಡುಗಡೆಯಾಗಿಲ್ಲ, ಬೆಳೆಹಾಹಿ ಪರಿಹಾರ ನೀಡಬೇಕು ಎಂದು ಮನವಿ ಮಾಡಬಹುದಿತ್ತು. ಈಗ ಪ್ರಧಾನಿ ಮೋದಿ ಭೇಟಿ ಮಾಡುತ್ತಿರುವುದು ಸಿದ್ದರಾಮಯ್ಯ ಅವರ ಅನವಶ್ಯಕ ನಾಟಕ ಎಂದು ವಾಗ್ದಾಳಿ ನಡೆಸಿದರು.
