ಬೆಂಗಳೂರು: ಎಡಪಂಥೀಯರು ಸೇರಿ ಧರ್ಮಸ್ಥಳ ವಿಚಾರದಲ್ಲಿ ಷಡ್ಯಂತ್ರ ನಡೆಸಿದ್ದಾರೆ. ಎಲ್ಲಾ ಎಡಪಂಥೀಯರಿಗೆ ಬೆಂಬಲರಾಗಿ ನಿಂತವರು ಸಿಎಂ ಸಿದ್ದರಾಮಯ್ಯ ಎಂದು ವಿಪಕ್ಷ ನಾಯಕ ಆರ್.ಅಶೋಕ್ ಕಿಡಿಕಾರಿದ್ದಾರೆ.
ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಆರ್.ಅಶೋಕ್, ಸಿಎಂ ಸಿದ್ದರಾಮಯ್ಯ ಅವರ ಮನೆಯಲ್ಲಿಯೇ ಸಭೆ ಸೇರಿ ಎಸ್ ಐಟಿ ತನಿಖೆ ಶುರು ಮಾಡಿದ್ದಾರೆ ಎಂದು ಆರೋಪಿಸಿದರು.
ಎಡಪಂಥೀಯರೇ ಧರ್ಮಸ್ಥಳ, ತಿರುಪತಿ, ಅಯ್ಯಪ್ಪ ದೇವಾಲಯ ಎಲ್ಲವನ್ನೂ ಹಾಳು ಮಾಡುವ ಯತ್ನ ನಡೆಸಿದ್ದಾರೆ. ದೇಶದ ಬಗ್ಗೆ ಕಡಿಮೆ ನಿಷ್ಠೆ ಇರುವವರು ಕಮ್ಯುನಿಷ್ಟರು. ಅವರೆಲ್ಲಾ ಸೇರಿ ಕುತಂತ್ರ ಮಾಡಲು ಹೊರಟಿದ್ದಾರೆ. ಇವರಿಗೆಲ್ಲಾ ಮಾಸ್ಟರ್ ಮೈಂಡ್ ಸಿಎಂ ಸಿದ್ದರಾಮಯ್ಯ. ಅವರ ಮನೆಯಲ್ಲಿ ಸಭೆ ಸೇರಿ ಬಳಿಕ ಎಸ್ ಐಟಿ ರಚನೆ ಮಾಡಲಾಗಿದೆ. ಪ್ರಣವ್ ಮೊಹಂತಿ ಹೆಸರು ಹೇಳಿ ಅವರನ್ನೇ ನೇಮಕ ಮಾಡಿದ್ದು ಎಡಪಂಥೀಯರು ಎಂದು ವಾಗ್ದಾಳಿ ನಡೆಸಿದ್ದಾರೆ.
ರಾಜ್ಯದ ಎಲ್ಲಾ ದೇವಸ್ಥಾನಗಳ ಪರ ನಾವು ಇರುತ್ತೇವೆ. ಹಿಂದೂ ದೇವಾಲಯಕ್ಕೆ ಏನಾದರೂ ಆದರೆ ನಾವು ಹೋರಾಟ ಮಾಡುತ್ತೇವೆ ಎಂದು ಎಚ್ಚರಿಸಿದರು.