ಸಿಎಂ ವಿರುದ್ಧ ಪ್ರಾಸಿಕ್ಯೂಷನ್ ಗೆ ರಾಜ್ಯಪಾಲರ ಅನುಮತಿ ಬಿಜೆಪಿ ಪಾದಯಾತ್ರೆಗೆ ಸಿಕ್ಕ ಯಶಸ್ಸು: ಸಿದ್ದರಾಮಯ್ಯ ತಕ್ಷಣ ರಾಜೀನಾಮೆ ನೀಡಲಿ: ಆರ್.ಅಶೋಕ್ ಆಗ್ರಹ

ಬೆಂಗಳೂರು: ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ತನಿಖೆಗೆ ರಾಜ್ಯಪಾಲರು ಅನುಮತಿ ನೀಡಿರುವುದು ಬಿಜೆಪಿ ಪಾದಯಾತ್ರೆಗೆ ಸಿಕ್ಕಿರುವ ಯಶಸ್ಸು ಎಂದು ವಿಪಕ್ಷ ನಾಯಕ ಆರ್‌.ಅಶೋಕ ತಿಳಿಸಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಆರ್.ಅಶೋಕ್, 86 ಸಾವಿರ ಜನರು ಮುಡಾ ನಿವೇಶನಕ್ಕೆ ಅರ್ಜಿ ಸಲ್ಲಿಸಿ ಕಾಯುತ್ತಿದ್ದಾರೆ. ಅವರಿಗೆ ಈ ತನಿಖೆಯಿಂದ ನ್ಯಾಯ ದೊರೆಯಲಿದೆ ಎಂದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮುಡಾ ಹಗರಣದ ಬಗ್ಗೆ ಸ್ಪಷ್ಟನೆ ನೀಡಲು ಸಾಧ್ಯವಾಗಿಲ್ಲ. ಸದನದಲ್ಲಿ ನಿಲುವಳಿ ಸೂಚನೆಗೆ ಅವಕಾಶ ಕೊಟ್ಟು ಜನರಲ್ಲಿರುವ ಗೊಂದಲ ನಿವಾರಣೆ ಮಾಡಬೇಕಿತ್ತು. ಅದನ್ನು ಬಿಟ್ಟು ಪಲಾಯನ ಮಾಡಿದ್ದರಿಂದ ಇದರಲ್ಲಿ ಏನೋ ಇದೆ ಎಂಬ ಅನುಮಾನ ಎಲ್ಲರಿಗೂ ಸ್ಪಷ್ಟವಾಯಿತು. ಪ್ರತಿ ಹಂತದಲ್ಲೂ ಸಿದ್ದರಾಮಯ್ಯನವರ ಹಸ್ತಕ್ಷೇಪ ಕಂಡುಬಂದಿದೆ. ಡಿ ನೋಟಿಫಿಕೇಶನ್‌, ಭೂ ಪರಿವರ್ತನೆ ಈ ಎಲ್ಲ ಹಂತದಲ್ಲೂ ಅವರ ಹುದ್ದೆಯ ಪ್ರಭಾವ ಬಳಕೆಯಾಗಿದೆ. ಇಷ್ಟೆಲ್ಲ ಆಗಿರುವಾಗ ಇದು ದೊಡ್ಡ ಹಗರಣ ಎಂಬುದು ಸಾಬೀತಾಗಿದೆ ಎಂದರು.

ಸಿಎಂ ಸಿದ್ದರಾಮತ್ತ ತಕ್ಷಣ ರಾಜೀನಾಮೆ ನೀಡಬೇಕು, ಸಿಬಿಐ ತನಿಖೆಯಾಗಬೇಕು. ಎಲ್ಲ ನಿವೇಶನಗಳನ್ನು ವಾಪಸ್‌ ಪಡೆಯಬೇಕೆಂಬುದು ನಮ್ಮ ಬೇಡಿಕೆ. ನಿವೇಶನ ವಂಚಿತರಾದ ಜನರಿಗೆ ನ್ಯಾಯ ಸಿಗಬೇಕೆಂದು ನಮ್ಮ ಆಗ್ರಹ ಎಂದರು.

ಬಿ.ಎಸ್‌.ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ ಆಗಿನ ರಾಜ್ಯಪಾಲರು ಖಾಸಗಿ ದೂರಿಗಾಗಿ ತನಿಖೆಗೆ ಅನುಮತಿ ನೀಡಿದ್ದರು. ಆಗ ಕಾಂಗ್ರೆಸ್‌ ಕೈವಾಡವಿತ್ತು ಎಂದರೆ ಅದನ್ನು ಒಪ್ಪುತ್ತಾರಾ? ಈಗ ನೈತಿಕತೆಯ ಹೊಣೆ ಹೊತ್ತು ಸಿಎಂ ರಾಜೀನಾಮೆ ನೀಡಬೇಕು. ಆಗ ಯಡಿಯೂರಪ್ಪ ತೋರಿದ ನಡೆಯನ್ನು ಸಿದ್ದರಾಮಯ್ಯ ಈಗ ತೋರಲಿ. ರಾಜ್ಯಪಾಲರು ಸರ್ಕಾರದ ಭಾಗ. ಅವರ ವಿರುದ್ಧ ಕಾಂಗ್ರೆಸ್‌ ಪ್ರತಿಭಟಿಸಿದರೆ ಅವರು ಸಂವಿಧಾನಕ್ಕೆ ತೋರುವ ಅಗೌರವ ಎಂದು ಹೇಳಿದರು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read