ಮೈಸೂರು: ಚಾಮುಂಡಿ ತಾಯಿಯಿಂದ ಕಾಂಗ್ರೆಸ್ ಅವನತಿ ಆರಂಭವಾಗಲಿದೆ ಎಂದು ವಿಪಕ್ಷ ನಾಯಕ ಆರ್.ಅಶೋಕ್ ವಾಗ್ದಾಳಿ ನಡೆಸಿದ್ದಾರೆ.
ಮೈಸೂರಿನ ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿ ತಾಯಿ ಚಾಮುಂಡಿ ದೇವಿಗೆ ವಿಪಕ್ಷ ನಾಯಕ ಆರ್.ಅಶೋಕ್ ಪೂಜೆ ಸಲ್ಲಿಸಿದರು. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ದಸರಾ ಉದ್ಘಾಟನೆಗೆ ಬೂಕರ್ ಪ್ರಶಸ್ತಿ ವಿಜೇತ ಲೇಖಕಿ ಬಾನು ಮುಷ್ತಾಕ್ ಆಯ್ಕೆ ಮಾಡಿರುವ ರಾಜ್ಯ ಸರ್ಕಾರದ ಕ್ರಮದ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿರುವ ಆರ್.ಅಶೋಕ್, ಸಿಎಂ ಸಿದ್ದರಾಮಯ್ಯ ನೇತೃತ್ವದ ಸರ್ಕಾರದ ನಡೆ ಸರಿಯಲ್ಲ ಎಂದರು.
ಇದೇ ವೇಳೆ ಚಾಮುಂಡಿ ಬೆಟ್ಟ ಹಿಂದೂಗಳ ಆಸ್ತಿಯಲ್ಲ ಎಂದು ಹೇಳಿಕೆ ನೀಡಿರುವ ಡಿಸಿಎಂ ಡಿ.ಕೆ.ಶಿವಕುಮಾರ್ ವಿರುದ್ಧ ಕಿಡಿಕಾರಿದ ಆರ್.ಅಶೋಕ್, ಚಾಮುಂಡಿ ದೇಗುಲ ಹಿಂದೂಗಳದ್ದಲ್ಲ ಎಂದಿದ್ದಾರೆ. ನಿಮಗೆ ಧೈರ್ಯವಿದ್ದರೆ ಮಸೀದಿ ಮುಸ್ಲಿಂರದ್ದಲ್ಲ ಎನ್ನಿ. ಚಾಮುಂಡಿ ಬೆಟ್ಟದ ಬಗ್ಗೆ ಪದೇ ಪದೇ ಮಾತನಾಡಿದರೆ ಸುಮ್ಮನಿರಲ್ಲ. ಚಾಮುಂಡಿ ಚಲೋ ಕೂಡ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಕಾಂಗ್ರೆಸ್ ಸರ್ಕಾರ ನಡೆದುಕೊಳ್ಳುತ್ತಿರುವ ರೀತಿಗೆ ಚಾಮುಂಡೇಶ್ವರಿ ತಾಯಿಯಿಂದಲೇ ಕಾಂಗ್ರೆಸ್ ನ ಅವನತಿ ಆರಂಭವಾಗಲಿದೆ ಎಂದು ವಾಗ್ದಾಳಿ ನಡೆಸಿದರು.