ಬೆಂಗಳೂರು: ಕರ್ನಾಟಕದ ಇತಿಹಾಸದಲ್ಲಿಯೇ ಬೆಂಗಳೂರಿನಲ್ಲಿ ಇಷ್ಟೊಂದು ಅಧ್ವಾನ ಆಗಿರಲಿಲ್ಲ. ಈ ಬಾರಿ ಆಗಿದೆ. ಬೆಂಗಳೂರು ಅಭಿವೃದ್ಧಿಗೆ ಕಾಂಗ್ರೆಸ್ ಸರ್ಕಾರ ಒಂದು ನಯಾಪೈಸೆ ಹಣ ಬಿಡುಗಡೆ ಮಾಡಿಲ್ಲ. ಅಭಿವೃದ್ಧಿ ಹೇಗೆ ಮಾಡಲು ಸಾಧ್ಯ? ಎಂದು ವಿಪಕ್ಷ ನಾಯಕ ಆರ್.ಅಶೋಕ್ ಕಿಡಿಕಾರಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಆರ್.ಅಶೋಕ್, ಬೆಂಗಳೂರಿನಲ್ಲಿ ಎಲ್ಲಿ ನೋಡಿದರು ಅಲ್ಲಿ ರಸ್ತೆ ಗುಂಡಿ, ಕಸದ ರಾಶಿ. ಬೆಂಗಳೂರು ತುಂಬೆಲ್ಲ ಅಧ್ವಾನಗಳಾಗಿವೆ. ಈ ಹಿಂದಿನ ಬಿಜೆಪಿ, ಜೆಡಿಎಸ್ ಸರ್ಕಾರಗಳು ಬೆಂಗಳೂರು ಅಭಿವೃದ್ಧಿಗಾಗಿಯೇ ವಿಶೇಷ ಅನುದಾನದಡಿ ಹಣ ಬಿಡುಗಡೆ ಮಾಡುತ್ತಿದ್ದವು. ಆದರೆ ಕಾಂಗ್ರೆಸ್ ಸರ್ಕಾರ ನಯಾಪೈಸೆ ಬಿಡುಗಡೆ ಮಾಡಿಲ್ಲ. ಎರಡುವರೆ ವರ್ಷಗಳಾದರೂ ಬೆಂಗಳೂರು ಅಭಿವೃದ್ಧಿಗಾಗಿ ಹಣ ಬಿಡುಗಡೆ ಮಾಡಿಲ್ಲ. ಕಾಂಗ್ರೆಸ್ ಸರ್ಕಾರ ಪಾಪರ್ ಆಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಡಿಸಿಎಂ ಡಿ.ಕೆ.ಶಿವಕುಮಾರ್, ಬಿಜೆಪಿಯವರು ಒಂದಾದರೂ ಸೇತುವೆ ಮಾಡಿದ್ದಾರಾ? ಎಂದು ಪ್ರಶ್ನಿಸಿದ್ದಾರೆ. ಒಂದಲ್ಲ, ನೂರು ಸೇತುವೆಗಳನ್ನು ನಿರ್ಮಿಸಿದ್ದನ್ನು ತೋರಿಸುತ್ತೇನೆ. ನೀವು ಒಂದಾದರು ಹೊಸ ಸೇತುವೆ ನಿರ್ಮಿಸಿದ್ದೀರಾ? ನಾವು ಆರಂಭಿಸಿರುವ ಯೋಜನೆ, ನಿರ್ಮಾಣ ಕಾಮಗಾರಿಯನ್ನು ಮುಂದುವರೆಸಿಕೊಂಡು ಹೋಗುತ್ತಿದ್ದೀರಿ. ಹೊಸದಾಗಿ ಯಾವುದೇ ಅಭಿವೃದ್ಧಿಕಾರ್ಯಗಳನ್ನೂ ಮಾಡುತ್ತಿಲ್ಲ. ನಯಾಪೈಸೆ ಅನುದಾನವನ್ನೂ ಬಿಡುಗಡೆ ಮಾಡುತ್ತಿಲ್ಲ ಎಂದು ವಾಗ್ದಾಳಿ ನಡೆಸಿದರು.