ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನಲ್ಲಿ ಬಿಜೆಪಿ ಮುಖಂಡನ ಪುತ್ರನಿಂದ ಲವ್-ಸೆಕ್ಸ್-ದೋಖಾ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಯುವಕನನ್ನು ಕೊನೆಗೂ ಪೊಲೀಸರು ಬಂಧಿಸಿದ್ದಾರೆ.
ಕೃಷ್ಣ ಜೆ.ರಾವ್ ಬಂಧಿತ ಆರೋಪಿ. ಬಿಜೆಪಿ ಮುಖಂಡನ ಪುತ್ರನಾಗಿರುವ ಕೃಷ್ಣ ಜೆ.ರಾವ್ ಯುವತಿಯನ್ನು ಮದುವೆಯಾಗುವುದಾಗಿ ನಂಬಿಸಿ ಮನೆಗೆ ಕರೆದೊಯ್ದು ಪದೇ ಪದೇ ಅತ್ಯಾಚಾರವೆಸಗಿದ್ದ. ಯುವತಿ ಗರ್ಭಿಣಿಯಾಗುತ್ತಿದ್ದಂತೆ ಆಕೆಯನ್ನು ಮದುವೆಯಾಗಲು ನಿರಾಕರಿಸಿದ್ದ. ನೊಂದ ಸಂತ್ರಸ್ತೆ ಪುತ್ತೂರು ಮಹಿಳಾ ಠಾಣೆಯಲ್ಲಿ ದೂರು ದಾಖಲಿಸಿದ್ದಳು. ಕೆಲ ದಿನಗಳ ಹಿಂದಷ್ಟೆ ಸಂತ್ರಸ್ತೆ ಮಗುವಿಗೆ ಜನ್ಮ ನೀಡಿದ್ದರು. ಪ್ರಕರಣ ದಾಖಲಾಗುತ್ತಿದ್ದಂತೆ ತಲೆಮರೆಸಿಕೊಂಡಿದ್ದ ಆರೋಪಿ ಕೃಷ್ಣ ಜೆ.ರಾವ್ ಗಾಗಿ ಪೊಲೀರು ಹುಡುಕಾಟ ನಡೆಸಿದ್ದರು.
ಇದೀಗ ಕೃಷ್ಣ ಜೆ.ರಾವ್ ನನ್ನು ಮೈಸೂರಿನಲ್ಲಿ ಬಂಧಿಸಲಾಗಿದೆ. ಯುವತಿಯನ್ನು ಪ್ರೀತಿಸಿ, ಕೈಕೊಟ್ಟ ಆರೋಪಿಯನ್ನು ಬಂಧಿಸುವಂತೆ ಆಗ್ರಹಿಸಿ ವಿವಿಧ ಸಂಘಟನೆಗಳು ಪ್ರತಿಭಟನೆಯನ್ನು ನಡೆಸಿದ್ದವು. ಇದೀಗ ಆರೋಪಿ ಬಂಧನವಾಗಿದ್ದು, ಇಂದು ಸಂಜೆ ವೇಳೆಗೆ ಕೋರ್ಟ್ ಗೆ ಹಾಜರುಪಡಿಸುವ ಸಾಧ್ಯತೆ ಇದೆ.