ಕಷ್ಟದಲ್ಲೂ ಸಾಧನೆ ಮಾಡಿದ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳ ಬಗ್ಗೆ ಇಲ್ಲಿದೆ ಮಾಹಿತಿ

ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಈ ಬಾರಿಯೂ ಬಾಲಕಿಯರೇ ಮೇಲುಗೈ ಸಾಧಿಸಿದ್ದಾರೆ. ಗ್ರಾಮೀಣ ಪ್ರದೇಶದ ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಪಾಸ್ ಆಗಿದ್ದಾರೆ. ಕಡು ಕಷ್ಟದಲ್ಲಿಯು ಅನೇಕರು ಸಾಧನೆ ಮಾಡಿದ್ದಾರೆ. ಅಂತಹ ಕೆಲವು ವಿದ್ಯಾರ್ಥಿಗಳ ಬಗ್ಗೆ ಇಲ್ಲಿದೆ ಮಾಹಿತಿ.

ಕಲಾ ವಿಭಾಗದಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದ ವೇದಾಂತ್ ಜ್ಞಾನೋಬಾ ನಾವಿ ವಿಜಯಪುರದ ಬಿ.ಎಲ್.ಡಿ.ಇ. ಸಂಸ್ಥೆಯ ಎಸ್.ಎಸ್. ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಯಾಗಿದ್ದಾರೆ. ಜಮಖಂಡಿ ತಾಲೂಕು ಕಲಬೀಳಗಿ ಗ್ರಾಮದ ವೇದಾಂತ ಅವರು ಇತಿಹಾಸ, ಅರ್ಥಶಾಸ್ತ್ರ, ರಾಜ್ಯಶಾಸ್ತ್ರ, ಶಿಕ್ಷಣ ಶಾಸ್ತ್ರದಲ್ಲಿ ನೂರಕ್ಕೆ ನೂರರಷ್ಟು ಅಂಕ ಪಡೆದಿದ್ದಾರೆ.  ಕ್ಷೌರಿಕ ವೃತ್ತಿ ಮಾಡುತ್ತಿದ್ದ ಅವರ ತಂದೆ 2020ರಲ್ಲಿ ಕೊರೋನಾದಿಂದ ಮೃತಪಟ್ಟಿದ್ದರು. ತಾಯಿ ಕೂಲಿ ಕೆಲಸಕ್ಕೆ ಹೋಗುತ್ತಾರೆ. ಗೃಹಲಕ್ಷ್ಮಿ ಯೋಜನೆ ಹಣ ತಮಗೆ ನೆರವಾಯಿತು ಎಂದು ವೇದಾಂತ ಅವರ ತಾಯಿ ಲಲಿತಾ ನಾವಿ ಹೇಳಿದ್ದಾರೆ.

ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕು ಚೌಡಾಪುರ ಗ್ರಾಮದ ಬಡ ಕೃಷಿಕ ಕುಟುಂಬದ ಬಿ.ವಿ. ಕವಿತಾ ದ್ವಿತೀಯ ಪಿಯುಸಿ ಕಲಾ ವಿಭಾಗದಲ್ಲಿ 600 ಕ್ಕೆ 596 ಅಂಕ ಪಡೆದು ಮೊದಲ ರ್ಯಾಂಕ್ ಪಡೆದಿದ್ದಾರೆ. ಅವರ ತಂದೆ ವೀರಬಸಪ್ಪ ಎರಡು ಎಕರೆ ಬಂಜರು ಜಮೀನು ಬಂದಿದ್ದು, ತಾಯಿ ಟೈಲರಿಂಗ್ ಕೆಲಸ ಮಾಡುತ್ತಾರೆ.

ಧಾರವಾಡದ ಕೆ.ಇ. ಬೋರ್ಡ್ ಸಂಯುಕ್ತ ಪದವಿಪೂರ್ವ ಕಾಲೇಜಿನ ರವೀನಾ ಲಮಾಣಿ ದ್ವಿತೀಯ ಪಿಯುಸಿ ಪರೀಕ್ಷೆ ಕಲಾ ವಿಭಾಗದಲ್ಲಿ ರಾಜ್ಯಕ್ಕೆ ಎರಡನೇ ಸ್ಥಾನ ಪಡೆದಿದ್ದಾರೆ. ಗದಗ ಜಿಲ್ಲೆ ಲಕ್ಷ್ಮೇಶ್ವರ ತಾಲೂಕಿನ ಅದರಹಳ್ಳಿ ಗ್ರಾಮದ ರೈತನ ಪುತ್ರಿಯಾದ ರವೀನಾ ಲಮಾಣಿ ಪರೀಕ್ಷೆಗೆ ಶುಲ್ಕ ಪಾವತಿಸಲು ಹಣ ಇಲ್ಲದಿದ್ದಾಗ ತಂದೆ ಸಾಲ ಮಾಡಿ ಹಣ ತಂದು ಕೊಟ್ಟಿದ್ದರು. ತಂದೆ ಸೋಮಪ್ಪ ಬಡ ರೈತರಾಗಿದ್ದು ಒಂದೂವರೆ ಎಕರೆ ಜಮೀನಿನಲ್ಲಿ ಕೃಷಿ ಮಾಡಿಕೊಂಡಿದ್ದಾರೆ. ಧಾರವಾಡದ ಸರಸ್ವತಪುರದಲ್ಲಿರುವ ಸಮಾಜ ಕಲ್ಯಾಣ ಇಲಾಖೆ ಹಾಸ್ಟೆಲ್ ನಲ್ಲಿ ಇದ್ದು ರವೀನಾ ಓದಿದ್ದರು.

ಚಿಕ್ಕಮಗಳೂರಿನ ಶ್ರೀ ಸಾಯಿ ಏಂಜೆಲ್ಸ್ ವಿದ್ಯಾರ್ಥಿ ಶ್ರೀಹರ್ಷ ಎಸ್ಎಸ್ಎಲ್ಸಿ ಓದುವಾಗಲೇ ತಾಯಿ ಕಳೆದುಕೊಂಡಿದ್ದರು. ಪಿಯುಸಿ ಪರೀಕ್ಷೆಗೆ ಮೊದಲು ತಂದೆಯನ್ನೂ ಕಳೆದುಕೊಂಡಿದ್ದರು. ಚಿಕ್ಕಮಗಳೂರು ತಾಲೂಕು ಮೈಲಿಮನೆ ಗ್ರಾಮದ ಹರ್ಷ ಅವರ ತಾಯಿ ಅನಾರೋಗ್ಯದಿಂದ ಮೃತಪಟ್ಟಿದ್ದು, ಕುಲುಮೆ ಕೆಲಸ ಮಾಡಿಕೊಂಡಿದ್ದ ತಂದೆ ಮಗನಿಗೆ ಉತ್ತಮ ಶಿಕ್ಷಣ ಕೊಡಿಸಬೇಕೆಂದು ವಸತಿ ಶಾಲೆಗೆ ದಾಖಲಿಸಿ ಹಂತ ಹಂತವಾಗಿ ಶುಲ್ಕ ನೀಡುವುದಾಗಿ ಆಡಳಿತ ಮಂಡಳಿಗೆ ಮನವಿ ಮಾಡಿದ್ದರು. ಆದರೆ ಡಿಸೆಂಬರ್ ನಲ್ಲಿ ಏಕಾಏಕಿ ಹೃದಯಾಘಾತದಿಂದ ಮೃತಪಟ್ಟಿದ್ದರು. ತಂದೆ, ತಾಯಿ ಇಲ್ಲದ ನೋವಿನಲ್ಲೂ ಶ್ರೀ ಹರ್ಷ ಶೇ. 96.83 ಅಂಕ ಪಡೆದಿದ್ದಾರೆ.

ರಾಯಚೂರು ಜಿಲ್ಲೆ ಲಿಂಗಸಗೂರು ತಾಲೂಕಿನ ಭೂಪುರ ತಾಂಡಾದ ಕೂಲಿ ಕಾರ್ಮಿಕ ಕುಟುಂಬದ ಕಾವೇರಿ ಕಲಾ ವಿಭಾಗದಲ್ಲಿ 592 ಅಂಕ ಪಡೆದಿದ್ದಾರೆ. ಅವರ ತಂದೆ ಶಿವಪ್ಪ ಮತ್ತು ತಾಯಿ ತಾರಾಬಾಯಿ ಕೃಷಿ ಕೂಲಿಕಾರ್ಮಿಕರಾಗಿದ್ದಾರೆ. ಜಮೀನು ಇದ್ದರೂ ಬರಗಾಲದ ಕಾರಣ ಗುಳೇ ಹೋಗುವುದು ಕುಟುಂಬಕ್ಕೆ ಅನಿವಾರ್ಯವಾಗಿದೆ.

ವಿಜಯನಗರ ಜಿಲ್ಲೆ ಕೊಟ್ಟೂರಿನ ರಾಜೀವ ನಗರದ ಬೀಗ ರಿಪೇರಿ ಮಾಡುವ ಕಡು ಬಡ ಕುಟುಂಬದ ಬಿ. ನಾಗರಾಜ ಅವರ ಪುತ್ರಿ ಶಾಲಿನಿ 586 ಅಂಕ ಪಡೆದಿದ್ದಾರೆ. ಕೊಟ್ಟೂರಿನ ಸರ್ಕಾರಿ ಪಿಯು ಕಾಲೇಜಿನಲ್ಲಿ ಓದಿದ ಅವರು ಈ ಸಾಧನೆ ಮಾಡಿದ್ದಾರೆ.

ರಾಯಚೂರು ಜಿಲ್ಲೆ ದೇವದುರ್ಗ ಸರ್ಕಾರಿ ಆಸ್ಪತ್ರೆಯ ಹೊರಗುತ್ತಿಗೆ ನೌಕರ ವೆಂಕೋಬ ಅವರ ಪುತ್ರಿ ಭೂಮಿಕಾ ವಿಜ್ಞಾನ ವಿಭಾಗದಲ್ಲಿ 588 ಅಂಕ ಪಡೆದು ಜಿಲ್ಲೆಗೆ ಪ್ರಥಮ ಸ್ಥಾನ ಗಳಿಸಿದ್ದಾರೆ. ಎಸ್.ಕೆ.ಎಮ್. ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿನಿಯಾಗಿರುವ ಭೂಮಿಕಾ ಅವರ ತಾಯಿ ಸರ್ಕಾರಿ ಶಾಲೆಯ ಬಿಸಿಯೂಟ ಸಹಾಯಕರಾಗಿ ಕೆಲಸ ಮಾಡುತ್ತಿದ್ದಾರೆ.

ಗಂಗಾವತಿ ತಾಲೂಕಿನ ಬಂಡ್ರಾಳ ಗ್ರಾಮದ ಹೂವಿನ ವ್ಯಾಪಾರಿ ವಲಿಸಾಬ್, ಶಾಹಿದಾ ಬೇಗಂ ದಂಪತಿಯ ಪುತ್ರಿ ಶಾ ಗುಪ್ತ ನಾಜ್ ವಿಜ್ಞಾನ ವಿಭಾಗದಲ್ಲಿ 574 ಅಂಕ ಗಳಿಸಿದ್ದಾರೆ.

ವಿಜಯನಗರ ಜಿಲ್ಲೆ ಕೊಟ್ಟೂರಿನ ಸರ್ಕಾರಿ ಪಿಯು ಕಾಲೇಜಿನ ಕಲಾ ವಿಭಾಗದ ಅಸಗೋಡು ಹಾಲಮ್ಮ 588 ಅಂಕ ಪಡೆದಿದ್ದಾರೆ. ಹರಪನಹಳ್ಳಿ ತಾಲೂಕು ಆಲದಹಳ್ಳಿ ಗ್ರಾಮದ ಕೃಷಿಕ ನಾಗೇಂದ್ರಪ್ಪ, ಟೈಲರ್ ಕೊಟ್ರಮ್ಮ ಅವರ ಪುತ್ರಿಯಾಗಿರುವ ಹಾಲಮ್ಮ ಬಿಡುವಿನ ವೇಳೆಯಲ್ಲಿ ಹೊಲ, ಮನೆ ಕೆಲಸದಲ್ಲಿ ಪೋಷಕರಿಗೆ ನೆರವಾಗುತ್ತಿದ್ದರು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read