ಬೆಂಗಳೂರು: ವಿದ್ಯಾರ್ಥಿ ಜೀವನದ ಪ್ರಮುಖ ಘಟ್ಟ ಎಂದೇ ಹೇಳಲಾಗುವ ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶ ಇಂದು ಪ್ರಕಟವಾಗಲಿದೆ.
ಪ್ರಸಕ್ತ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆ -1ರ ಫಲಿತಾಂಶವನ್ನು ಮಂಗಳವಾರ ಮಧ್ಯಾಹ್ನ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಮಧು ಬಂಗಾರಪ್ಪ ಪ್ರಕಟಿಸಲಿದ್ದಾರೆ. ಮಲ್ಲೇಶ್ವರಂನ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಕಚೇರಿಯಲ್ಲಿ ಮಧ್ಯಾಹ್ನ 12:30 ಕ್ಕೆ ಸಚಿವರು ಫಲಿತಾಂಶ ಬಿಡುಗಡೆ ಮಾಡಲಿದ್ದಾರೆ. ನಂತರ 1.30ಕ್ಕೆ ವಿದ್ಯಾರ್ಥಿಗಳು https://karresults.nic.in ವೆಬ್ಸೈಟ್ನಲ್ಲಿ ಫಲಿತಾಂಶ ವೀಕ್ಷಿಸಬಹುದು.
ಮಾರ್ಚ್ 1 ರಿಂದ 20ರವರೆಗೆ ರಾಜ್ಯದ 1771 ಪರೀಕ್ಷಾ ಕೇಂದ್ರಗಳಲ್ಲಿ ನಡೆದ ಪಿಯುಸಿ ಪರೀಕ್ಷೆಗೆ 7 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಹಾಜರಾಗಿದ್ದರು. ಪರೀಕ್ಷೆ ಮುಗಿದ ಮರುದಿನದಿಂದಲೇ ರಾಜ್ಯಾದ್ಯಂತ 76 ಕೇಂದ್ರಗಳಲ್ಲಿ 25 ಸಾವಿರಕ್ಕೂ ಹೆಚ್ಚು ಮೌಲ್ಯಮಾಪಕರು ಉತ್ತರ ಪತ್ರಿಕೆಗಳ ಮೌಲ್ಯಮಾಪನ ನಡೆಸಿದರು. ಏಪ್ರಿಲ್ 3ರ ವೇಳೆಗೆ ಮೌಲ್ಯಮಾಪನ ಪೂರ್ಣಗೊಳಿಸಿ ಫಲಿತಾಂಶದ ಕಂಪ್ಯೂಟರೀಕರಣ ಕಾರ್ಯ ಮುಗಿಸಿದ್ದು, ಇಂದು ಫಲಿತಾಂಶ ಪ್ರಕಟಿಸಲಾಗುತ್ತಿದೆ.
