ಪಿಎಸ್ಐ ನೇಮಕಾತಿ ಪರೀಕ್ಷೆ ಮುಂದೂಡಿಕೆ ಬಗ್ಗೆ KEA ಜತೆ ಚರ್ಚೆ, ಮತ್ತೆ 600 ಪಿಎಸ್ಐ ಗಳ ನೇಮಕಾತಿ: ಪರಮೇಶ್ವರ್ ಮಾಹಿತಿ

ಬೆಂಗಳೂರು: ಪಿಎಸ್ಐ ನೇಮಕ ಪರೀಕ್ಷೆ ಮುಂದೂಡಿಕೆ ಬಗ್ಗೆ ಕೆಇಎ ಹಾಗೂ ಇಲಾಖೆ ಅಧಿಕಾರಿಗಳೊಂದಿಗೆ ಚರ್ಚಿಸಿ ನಿರ್ಧಾರ ಕೈಗೊಳ್ಳಲಾಗುವುದು ಎಂದು ಗೃಹ ಸಚಿವ ಡಾ. ಜಿ. ಪರಮೇಶ್ವರ್ ತಿಳಿಸಿದ್ದಾರೆ.

ಮಂಗಳವಾರ ಬಿಜೆಪಿ ನಿಯೋಗ ಸಲ್ಲಿಸಿದ ಮನವಿ ಸ್ವೀಕರಿಸಿ ಮಾತನಾಡಿದ ಅವರು, 402 ಪಿಎಸ್ಐ ಹುದ್ದೆಗಳ ನೇಮಕಾತಿ ಪರೀಕ್ಷೆಯ ಹೊಣೆಯನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರಕ್ಕೆ ವಹಿಸಲಾಗಿದೆ. ಸೆ. 22 ರಂದು ಪರೀಕ್ಷೆ ನಡೆಸಲು ನಿರ್ಧರಿಸಲಾಗಿದೆ. ಪಿಎಸ್ಐ ಪರೀಕ್ಷೆ ಆಕಾಂಕ್ಷಿಗಳಲ್ಲಿ ಹಲವರು ಯುಪಿಎಸ್ಸಿ ಮುಖ್ಯ ಪರೀಕ್ಷೆ ಬರೆಯುತ್ತಿದ್ದು, ಹೀಗಾಗಿ ಪರೀಕ್ಷೆಯ ದಿನ ಮುಂದೂಡುವಂತೆ ಮನವಿ ಬಂದಿದೆ ಎಂದು ತಿಳಿಸಿದ್ದಾರೆ.

ನಮಗೆ ಯುಪಿಎಸ್ಸಿ ಪರೀಕ್ಷೆ ಮುಖ್ಯವಲ್ಲ, ಇಲಾಖೆಯಲ್ಲಿ ಸಾವಿರ ಪಿಎಸ್ಐ ಹುದ್ದೆಗಳು ಖಾಲಿ ಇರುವ ಹಿನ್ನೆಲೆಯಲ್ಲಿ ನಿಯಮ 32ರ ಅಡಿ ಎಎಸ್ಐಗಳಿಗೆ ಪಿಎಸ್ಐ ಹುದ್ದೆಗೆ ಬಡ್ತಿ ನೀಡಲಾಗಿದೆ. ಕರ್ತವ್ಯ ನಿರ್ವಹಿಸಬೇಕಾದ ಪಿಎಸ್ಐ ಇಲ್ಲವಾದರೆ ಇಲಾಖೆಯನ್ನು ಮುನ್ನಡೆಸುವುದು ಹೇಗೆ ಎಂದು ಪ್ರಶ್ನಿಸಿದ್ದಾರೆ.

ಕಳೆದ ನಾಲ್ಕು ವರ್ಷಗಳಿಂದ ಪಿಎಸ್ಐ ನೇಮಕಾತಿ ನಡೆದಿಲ್ಲ. ಸಿಂಧುತ್ವ, ದಾಖಲಾತಿ ಪರಿಶೀಲನೆ, ತರಬೇತಿ ಪಡೆದು ಇಲಾಖೆಗೆ ಸೇರಲು ಒಂದು ವರ್ಷ ಬೇಕಿದ್ದು, ಎರಡು ವರ್ಷ ಪ್ರೊಬೇಷನರಿ ಅವಧಿಯಲ್ಲಿ ಕಾರ್ಯನಿರ್ವಹಿಸುತ್ತಾರೆ. ಈ ಹಿನ್ನೆಲೆಯಲ್ಲಿ ಆದಷ್ಟು ಶೀಘ್ರವೇ 402 ಪಿಎಸ್ಐ ಹುದ್ದೆಗಳ ನೇಮಕಾತಿಗೆ ಮುಂದಾಗಿದ್ದು, ಇದಾದ ನಂತರ 600 ಪಿಎಸ್ಐ ಹುದ್ದೆಗಳ ನೇಮಕಾತಿಗೆ ಸಿದ್ಧತೆ ಮಾಡಿಕೊಳ್ಳಬೇಕಿದೆ ಎಂದು ತಿಳಿಸಿದ್ದಾರೆ.

ಈಗ ಪರೀಕ್ಷೆ ಮುಂದೂಡಿದರೆ ಮುಂದಿನ ಆರು ತಿಂಗಳವರೆಗೆ ಪರೀಕ್ಷೆ ನಡೆಸಲು ದಿನ ಖಾಲಿ ಇಲ್ಲ ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಅಧಿಕಾರಿಗಳು ತಿಳಿಸಿದ್ದಾರೆ ಎಂದು ಹೇಳಿದ್ದಾರೆ.

ಬಿಜೆಪಿ ನಿಯೋಗದಲ್ಲಿ ಡಾ. ಸಿ.ಎನ್. ಅಶ್ವತ್ಥ್ ನಾರಾಯಣ್, ಧೀರಜ್ ಮುನಿರಾಜು ನೇತೃತ್ವ ವಹಿಸಿದ್ದರು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read