ರಾಯಚೂರು: ರಾಯಚೂರು ಜಿಲ್ಲೆ ಮಸ್ಕಿ ವಿಧಾನಸಭೆ ಕ್ಷೇತ್ರದ ಚುನಾವಣೆ ವೇಳೆ ಪ್ರಚೋದನಕಾರಿ ಭಾಷಣ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಸ್ಕಿಯ ಜೆಎಂಎಫ್ಸಿ ನ್ಯಾಯಾಲಯ ವಿಧಾನ ಪರಿಷತ್ ಸದಸ್ಯರಾದ ನಟಿ ಉಮಾಶ್ರೀ ಅವರಿಗೆ ಗುರುವಾರ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ.
ಉಮಾಶ್ರೀ ಅವರ ಪರವಾಗಿ ವಕೀಲ ನಬೀ ಶೇಡಮಿ ರಸೂಲ್, ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕ ಆರ್. ಹನುಮೇಶ ನಾಯಕ ಅವರು ವಾದ ಮಂಡಿಸಿದ್ದಾರೆ. ವಾದ ಪ್ರತಿವಾದ ಆಲಿಸಿದ ನ್ಯಾಯಾಧೀಶರಾದ ರೂಪಶ್ರೀ ವಗ್ಗಾ ಅವರು 50,000 ರೂ. ಬಾಂಡ್ ಮತ್ತು ಒಬ್ಬ ಜಾಮೀನುದಾರನ ಶ್ಯೂರಿಟಿ ನೀಡಬೇಕು ಎನ್ನುವ ಷರತ್ತು ವಿಧಿಸಿ ಜಾಮೀನು ನೀಡಿ ಆದೇಶಿಸಿದ್ದಾರೆ.
ರವಿಕುಮಾರ ಮಡಿವಾಳ ಎಂಬುವರು ಜಾಮೀನು ನೀಡಿದ್ದಾರೆ. 2023ರ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಆರ್. ಬಸವನಗೌಡ ತುರುವಿಹಾಳ ಅವರ ಪರವಾಗಿ ನಡೆದ ಪ್ರಚಾರ ಸಭೆಯಲ್ಲಿ ಉಮಾಶ್ರೀ ಪ್ರಚೋದನಕಾರಿ ಭಾಷಣ ಮಾಡಿದ್ದರು ಎಂದು ಚುನಾವಣಾ ಅಧಿಕಾರಿ ದೂರು ನೀಡಿದ್ದರು.
