ಬೆಂಗಳೂರು: ಬೆಂಗಳೂರಿನ ಎಂ.ಎಸ್. ರಾಮಯ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿಯಾಗಿ ಆರೋಗ್ಯ ವಿಚಾರಿಸಿದ್ದೇನೆ, ಅವರ ಆರೋಗ್ಯವೀಗ ಉತ್ತಮವಾಗಿದೆ. ಆರೋಗ್ಯ ಸುಧಾರಣೆಯಾಗಿದೆ ಎಂದು ಸಿಎಂ ಸಿದ್ಧರಾಮಯ್ಯ ತಿಳಿಸಿದ್ದಾರೆ.
ಇಂದು ಬೆಂಗಳೂರಿನ ಎಂ.ಎಸ್. ರಾಮಯ್ಯ ಆಸ್ಪತ್ರೆಯ ಬಳಿ ಮಾಧ್ಯಮದವರೊಂದಿಗೆ ಮಾತನಾಡಿದ ಸಿಎಂ, ರಾಜ್ಯದ ಉಳಿದ ಜಿಲ್ಲೆಗಳಿಗೆ ಹೋಲಿಸಿದರೆ, ಉತ್ತರ ಕರ್ನಾಟಕದ ಸುಮಾರು 9 ಜಿಲ್ಲೆಗಳಲ್ಲಿ ಶೇ.95 ರಷ್ಟು ಪ್ರವಾಹ ಸಂಭವಿಸಿದೆ. ಬೆಳಗಾವಿ, ವಿಜಯಪುರ, ಕಲಬುರಗಿ, ಬಾಗಲಕೋಟೆ, ಬೀದರ್, ಯಾದಗಿರಿ, ರಾಯಚೂರು, ಹುಬ್ಬಳ್ಳಿ – ಧಾರವಾಡ, ಗದಗ ಜಿಲ್ಲೆಗಳಲ್ಲಿ ಪ್ರವಾಹ ಸಂಭವಿಸಿದೆ ಎಂದು ಹೇಳದ್ದಾರೆ.
ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಅವರು ಪ್ರವಾಹ ಪರಿಹಾರವನ್ನು ಕೇಂದ್ರದಿಂದ ಕೊಡಿಸುವುದಾಗಿ ಹೇಳಿರುವುದನ್ನು ಸ್ವಾಗತಿಸುತ್ತೇನೆ. ಆದರೆ 2023ರಲ್ಲಿ ರಾಜ್ಯಕ್ಕೆ ಬರಗಾಲ ಬಂದಿದ್ದಾಗ, ಕೇಂದ್ರ ಸರ್ಕಾರದವರು ಬರಪರಿಹಾರ ನೀಡದೇ ಸುಪ್ರೀಂಕೋರ್ಟ್ ನ ಬಳಿ ಧಾವಿಸಿ, ಬಳಿಕ ಕಾನೂನಾತ್ಮಕ ಹೋರಾಟದಿಂದ ಪರಿಹಾರ ತೆಗೆದುಕೊಳ್ಳುವಂತಾಯಿತು. ಪ್ರಸ್ತುತ ಕುಮಾರಸ್ವಾಮಿಯವರು ಪರಿಹಾರ ಕೊಡಿಸುವುದಾದರೆ ಪ್ರಸ್ತಾವನೆಯನ್ನು ರಾಜ್ಯ ಸರ್ಕಾರ ಸಲ್ಲಿಸಲಿದೆ ಎಂದು ಹೇಳಿದ್ದಾರೆ.
ನಾವು ಮಾಡುತ್ತಿರುವ ಸಮೀಕ್ಷೆ ಸಾಮಾಜಿಕ, ಆರ್ಥಿಕ ಹಾಗೂ ಶೈಕ್ಷಣಿಕ ಸಮೀಕ್ಷೆಯಾಗಿದೆ. ಬಾಬಾಸಾಹೇಬ್ ಅಂಬೇಡ್ಕರ್ ಅವರು ತಿಳಿಸಿದಂತೆ ಅಸಮಾನತೆ ಹೋಗಲಾಡಿಸಲು ದುರ್ಬಲರು ಸಮಾಜದ ಮುಖ್ಯವಾಹಿನಿಗೆ ಬರುವಂತಾಗಬೇಕು. ಸಮಾಜದಲ್ಲಿ ಅಸಮಾನತೆ ನಿರಂತರವಾಗಿರಬೇಕು ಎಂಬುದು ಬಿಜೆಪಿಯವರ ಬಯಕೆ. ನಿರ್ದಿಷ್ಠವಾದ ಜಾತಿಯೊಂದು ಉತ್ತುಂಗದಲ್ಲಿರಬೇಕೆಂದು ಬಿಜೆಪಿ ಬಯಸುತ್ತದೆ. ಕಾಂಗ್ರೆಸ್ ವರಿಷ್ಠ ರಾಹುಲ್ ಗಾಂಧಿ ಹಾಗೂ ರಾಜ್ಯ ಸರ್ಕಾರದ ಒತ್ತಾಯದ ಮೇರೆಗೆ, ಕೇಂದ್ರ ಸರ್ಕಾರವೂ ಜಾತಿಗಣಿತಿ ನಡೆಸಲು ಮುಂದಾಗಿದೆ ಎಂದು ಹೇಳಿದ್ದಾರೆ.