ಆಸ್ತಿ ಮಾಲೀಕರಿಗೆ ಗುಡ್ ನ್ಯೂಸ್: ನಕಲಿ ದಾಖಲೆ ಸೃಷ್ಟಿಸಿದ ಆಸ್ತಿ ನೋಂದಣಿ ರದ್ದು ಕಾಯ್ದೆ ಶೀಘ್ರ ಜಾರಿ

ಬೆಂಗಳೂರು: ನಕಲಿ ದಾಖಲೆಗಳನ್ನು ಸೃಷ್ಟಿಸಿದ ಆಸ್ತಿ ನೋಂದಣಿ ರದ್ದು ಮಾಡುವ ಕಾಯ್ದೆ ಶೀಘ್ರವೇ ಜಾರಿ ಆಗಲಿದೆ. ತಮಿಳುನಾಡು ಮಾದರಿಯಲ್ಲಿ ಕರ್ನಾಟಕ ನೋಂದಣಿ ಕಾಯ್ದೆಯನ್ನು ಮಾರ್ಪಾಡು ಮಾಡಲಿದ್ದು, ನಕಲಿ ದಾಖಲೆ ಸೃಷ್ಟಿಸಿದ ನೋಂದಣಿಗಳನ್ನು ರದ್ದುಪಡಿಸುವ ಅಧಿಕಾರವನ್ನು ಜಿಲ್ಲಾ ನೋಂದಣಿ ಅಧಿಕಾರಿಗಳಿಗೆ ನೀಡಲಾಗುವುದು ಎಂದು ಕಂದಾಯ ಸಚಿವ ಆರ್. ಅಶೋಕ್ ತಿಳಿಸಿದ್ದಾರೆ.

ಇದರಿಂದ ಅಸಲಿ ವಾರಸುದಾರರಿಗೆ ನ್ಯಾಯ ಸಿಗಲಿದೆ. ನಿವೇಶನ, ಮನೆ, ಕಟ್ಟಡ, ಕೃಷಿ ಭೂಮಿ ಮೊದಲಾದ ಆಸ್ತಿಗಳ ಕ್ರಯ ಪತ್ರ, ದಾನ ಪತ್ರ, ವಿಭಾಗ ಪತ್ರ, ಕರಾರು ಪತ್ರ, ಹಕ್ಕು ಬಿಡುಗಡೆ ಸಂದರ್ಭದಲ್ಲಿ ನಕಲಿ ದಾಖಲೆ ಸೃಷ್ಟಿಸಿ ಅಥವಾ ಬದಲಿ ವ್ಯಕ್ತಿಗಳು ಸಬ್ ರಿಜಿಸ್ಟ್ರಾರ್ ಕಚೇರಿಗೆ ಬಂದು ನೋಂದಣಿ ಮಾಡಿಸಿದಲ್ಲಿ ಅಂತಹ ದಾಖಲೆ ಪತ್ರಗಳನ್ನು ರದ್ದುಪಡಿಸುವ ಅಧಿಕಾರವನ್ನು ಜಿಲ್ಲಾ ನೊಂದನಾಧಿಕಾರಿಗಳಿಗೆ ನೀಡಲು ಕಂದಾಯ ಇಲಾಖೆ ಮುಂದಾಗಿದೆ.

ನಕಲಿ ದಾಖಲೆ ಸೃಷ್ಟಿಸಿ ನೋಂದಣಿಯಾದ ಪತ್ರಗಳ ರದ್ದು ಮಾಡಲು ನಿಜವಾದ ವಾರಸುದಾರರು ಕೋರ್ಟ್ ಮೊರೆ ಹೋದರೆ ಕನಿಷ್ಠ 5 ವರ್ಷ ಬೇಕಿದೆ. ಇದನ್ನು ದುರ್ಬಳಕೆ ಮಾಡಿಕೊಳ್ಳುವ ಭೂಗಳ್ಳರು ನಕಲಿ ದಾಖಲೆ ಸೃಷ್ಟಿಸಿ ಆಸ್ತಿ ನೋಂದಣಿ ಮಾಡಿಕೊಳ್ಳುತ್ತಾರೆ. ಇದಕ್ಕೆ ಕಡಿವಾಣ ಹಾಕಲು ಸರ್ಕಾರ ಕ್ರಮ ಕೈಗೊಂಡಿದೆ.

ನಕಲಿ ದಾಖಲೆ ಸೃಷ್ಟಿಸಿ ನೋಂದಣಿಯಾದ ದಾಖಲೆ ಪತ್ರಗಳನ್ನು ಜಿಲ್ಲಾ ನೋಂದಣಿ ಅಧಿಕಾರಿ ರದ್ದುಪಡಿಸಲಿದ್ದು, ತಪ್ಪಿತಸ್ಥರ ವಿರುದ್ಧ ಸ್ಥಳೀಯ ಪೊಲೀಸ್ ಠಾಣೆಗೆ ದೂರು ನೀಡಲಾಗುತ್ತದೆ. ಸರ್ಕಾರಕ್ಕೆ ಪಾವತಿಸಿದ ನೋಂದಣಿ ಮತ್ತು ಮುದ್ರಾಂಕ ಶುಲ್ಕ ಹಿಂತಿರುಗಿಸುವುದಿಲ್ಲ ಎಂದು ಹೇಳಲಾಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read