ನಿನ್ನೆಯಷ್ಟೇ ಪ್ರೊ ಕಬಡ್ಡಿ ಸೀಸನ್ ಹನ್ನೊಂದರ ಹರಾಜು ಪ್ರಕ್ರಿಯೆ ನಡೆದಿದ್ದು, ರೆಕಾರ್ಡ್ ಬ್ರೇಕರ್ ಪರ್ದೀಪ್ ನರ್ವಾಲ್ ಅವರನ್ನು ಬೆಂಗಳೂರು ಬುಲ್ಸ್ ಫ್ರಾನ್ಚೈಸಿ ಎಪ್ಪತ್ತು ಲಕ್ಷ ರೂಪಾಯಿಗೆ ಖರೀದಿ ಮಾಡಿದೆ. ಈ ಮೂಲಕ ರೈಡರ್ಗಳ ಕೊರತೆಯಿದ್ದ ಬೆಂಗಳೂರು ಬುಲ್ಸ್ ತಂಡಕ್ಕೆ ಇದೀಗ ಆನೆ ಬಲ ಬಂದಂತಾಗಿದೆ.
ಪ್ರೊ ಕಬಡ್ಡಿಯ ಎರಡನೇ ಆವೃತ್ತಿಯಲ್ಲಿ ಬೆಂಗಳೂರು ಬುಲ್ಸ್ ತಂಡದಲ್ಲಿದ್ದ ಡುಮ್ಕಿ ಕಿಂಗ್ ಪರ್ದೀಪ್ ನರ್ವಾಲ್ ಒಂಬತ್ತು ವರ್ಷಗಳ ಬಳಿಕ ತಮ್ಮ ಹಳೆಯ ತಂಡಕ್ಕೆ ಮರಳಿದ್ದು, ಬೆಂಗಳೂರು ಅಭಿಮಾನಿಗಳಲ್ಲಿ ಸಂತಸ ಮನೆ ಮಾಡಿದೆ. ಮತ್ತೊಂದೆಡೆ ತಮಿಳ್ ತಲೈವಾಸ್ ತಂಡದ ಆಜಿಂಖ್ಯಾ ಪವಾರ್ ಅವರನ್ನು ಸಹ 1.107 ಕೋಟಿ ರೂಪಾಯಿಗೆ ಖರೀದಿ ಮಾಡಿದೆ. ಇನ್ನು ಬೆಂಗಳೂರು ಬುಲ್ಸ್ ತಂಡದಲ್ಲಿದ್ದ ಭರತ್ ಹೂಡಾ ಯುಪಿ ಯೋಧಾಸ್ ಪಾಲಾಗಿದ್ದಾರೆ.