ಬೆಂಗಳೂರು: ಸ್ಯಾಂಡಲ್ ವುಡ್ ನಟ ಪ್ರಥಮ್ ಗೆ ದುಷ್ಕರ್ಮಿಗಳು ಜೀವ ಬೆದರಿಕೆ ಹಾಕಿದ್ದಾರೆ ಎಂದು ತಿಳಿದುಬಂದಿದೆ.
ಸಿನಿಮಾ ಚಿತ್ರೀಕರಣಕ್ಕೆ ಹೋಗುವ ಮುನ್ನ ನಟ ಪ್ರಥಮ್ ದೊಡ್ಡಬಳ್ಳಾಪುರದ ದೇವಸ್ಥಾನಕ್ಕೆ ತೆರಳಿದ್ದರು. ಈ ವೇಳೆ ದುಷ್ಕರ್ಮಿಗಳ ಗುಂಪೊಂದು ಪ್ರಥಮ್ ಗೆ ಜೀವ ಬೆದರಿಕೆಯೊಡ್ಡಿದೆ.
ಈ ಬಗ್ಗೆ ಪ್ರಥಮ್ ವ್ಯಕ್ತಿಯೊಬ್ಬರೊಂದಿಗೆ ಮಾತನಾಡಿರುವ ಆಡೀಯೋ ವೈರಲ್ ಆಗಿದೆ. ದೊಡ್ಡಬಳ್ಳಾಪುರ ದೇವಸ್ಥಾನಕ್ಕೆ ಹೋಗಿದ್ದ ವೇಳೆ ದುಷ್ಕರ್ಮಿಗಳು ಡ್ರ್ಯಾಗರ್ ತೋರಿಸಿ ಬೆದರಿಕೆ ಹಾಕಿದ್ದಾರೆ. ಪೂಜೆ ಮುಗಿಸಿ ವಾಪಾಸ್ ಆಗುತ್ತಿದ್ದ ವೇಳೆ ಪ್ರಥಮ್ ಕಾರನ್ನು ಅಡ್ಡಗಟ್ಟಿದ ದುಷ್ಕರ್ಮಿಗಳು, ಬಲವಂತವಾಗಿ ಕರೆದೊಯ್ದು ನಮ್ಮ ಬಾಸ್ ಬಗ್ಗೆ ಮಾತನಾಡ್ತಿಯಾ ಅಂತ ಹಲ್ಲೆಗೆ ಯತ್ನಿಸಿ, ಅವಾಚ್ಯವಾಗಿ ನಿಂದಿಸಿ ಬೆದರಿಕೆ ಹಾಕಿದ್ದಾರಂತೆ. ಅಲ್ಲಿಂದ ತಪ್ಪಿಸಿಕೊಂಡು ಬಂದ ಪ್ರಥಮ್ ಬೆಂಗಳೂರು ಗ್ರಾಮಾಂತರ ಎಸ್ ಪಿ ಸಿ.ಕೆ.ಬಾಬಾ ಅವರನ್ನು ಭೇಟಿಯಾಗಿ ಘಟನೆ ಬಗ್ಗೆ ವಿವರಿಸಿದ್ದಾಗಿ ಹಾಗೂ ಎಸ್ ಪಿ ಸಂಬಂಧ ಪಟ್ಟ ಠಾಣೆಯಲ್ಲಿ ದೂರು ನೀಡುವಂತೆ ಸಲಹೆ ನೀಡಿದ್ದಾರೆ ಎಂದು ತಿಳಿದುಬಂದಿದೆ.