ಮೈಸೂರು: ರಾಜ್ಯ ಸರ್ಕಾರದ ಜಾತಿ ಗಣತಿ ಸಮೀಕ್ಷೆಗೆ ತೀವ್ರ ವಿರೋಧ ವ್ಯಕ್ತವಾಗುತ್ತಿದೆ. ಹಿಂದೂ ಸಮಾಜದ ಜಾತಿಗಳನ್ನು ಬಿಡಿ ಬಿಡಿಯಾಗಿ ಒಡೆದು ಅನ್ಯ ಧರ್ಮದ ಸಂಖ್ಯೆ ಹೆಚ್ಚು ತೋರಿಸುವ ಹಿನ್ನಾರವಿದು ಎಂದು ಮಾಜಿ ಸಂಸದ ಪ್ರತಾಪ್ ಸಿಂಹ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಪ್ರತಾಪ್ ಸಿಂಹ, ರಾಜ್ಯದಲ್ಲಿ ಮುಸ್ಲಿಂ ಜನಸಂಖ್ಯೆ ಹೆಚ್ಚು ತೋರಿಸಲು ಪ್ರಯತ್ನ ಮಾಡುತ್ತಿದ್ದಾರೆ. ಹಿಂದೂಗಳ ಜಾತಿಗಳನ್ನು ಒಡೆದು ರಾಜಕೀಯ ದುರುದ್ದೇಶಕ್ಕಾಗಿ ಜಾತಿ ಗಣತಿ ಸಮೀಕ್ಷೆ ನಡೆಸುತ್ತಿದ್ದಾರೆ. ಸಮಾಜದ ಸ್ವಾಮೀಜಿಗಳು ಈ ಬಗ್ಗೆ ಧ್ವನಿಯೆತ್ತಬೇಕು ಎಂದರು.
ಬ್ರಾಹ್ಮಣ ಕ್ರಿಶ್ಚಿಯನ್, ಒಕ್ಕಲಿಗ ಕ್ರಿಶ್ಚಿಯನ್ ಇಂತಹ ಸಮೀಕ್ಷೆಯನ್ನು ಒಪ್ಪಲು ಸಾಧ್ಯವಿಲ್ಲ. ಕಾನೂನು ಪದವೀಧರನಾಗಿ ಸಿಎಂ ಸಿದ್ದರಾಮಯ್ಯ ಇಂತಹ ಯತ್ನ ನಡೆಸಲು ಹೊರಟಿರುವುದು ತಪ್ಪು ಎಂಬ ಅರಿವು ಅವರಿಗೂ ಇದೆ. ಆದರೂ ರಾಜಕೀಯಕ್ಕಾಗಿ ಈ ದಾಳ ಉರುಳಿಸಿದ್ದಾರೆ. ಕುರ್ಚಿ ಭದ್ರಪಡಿಸಿಕೊಳ್ಳಲು ಸಿದ್ದರಾಮಯ್ಯ ಮಾಡುತ್ತಿರುವ ತಂತ್ರವಿದು ಎಂದು ಕಿಡಿಕಾರಿದ್ದಾರೆ.
ಶ್ರೀ ಶ್ರೀ ಶ್ರೀ ಎಂದು ಹೆಸರಿಟ್ಟುಕೊಂಡಿರುವವರು ಈ ಬಗ್ಗೆ ಧ್ವನಿಯೆತ್ತಬೇಕು. ಹಿಂದೂ ಸಮಾಜವನ್ನು ಒಡೆದು ರಾಜಕೀಯ ಮಾಡಲು ಹೊರಟಿರುವ ಸಿಎಂ ಸಿದ್ದರಾಮಯ್ಯನವರಿಗೆ ಮುಂದಾಗುವ ಅನಾಹುತಗಳ ಬಗ್ಗೆ ತಿಳಿಹೇಳಬೇಕು ಎಂದು ಒತ್ತಾಯಿಸಿದ್ದಾರೆ.