ಮೈಸೂರು: ಸಚಿವ ಸಂತೋಷ್ ಲಾಡ್ ದಿನ ಬೆಳಗಾದರೆ ಪ್ರಧಾನಿ ಮೋದಿಯವರನ್ನು ಟೀಕಿಸುತ್ತಾರೆ. ಇಲ್ಲವಾದರೆ ಅವರಿಗೆ ತಿಂದಿದ್ದು ಅರಗಲ್ಲ ಎಂದು ಮಾಜಿ ಸಂಸದ ಪ್ರತಾಪ್ ಸಿಂಹ ವಾಗ್ದಾಳಿ ನಡೆಸಿದ್ದಾರೆ.
ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಪ್ರತಾಪ್ ಸಿಂಹ, ಇಡೀ ದೇಶ ಇಂದು ಪ್ರಧಾನಿ ನರೇಂದ್ರ ಮೋದಿಯವರನ್ನು ಕೊಂಡಾಡುತ್ತಿದೆ. 140 ಕೋಟಿ ಜನರು ಮೂರನೇ ಬಾರಿಗೆ ಮೋದಿಯವರ ನಾಯಕತ್ವಕ್ಕೆ ಗೆಲುವು ನೀಡಿ ಪ್ರಧಾನಿಯವರನ್ನಾಗಿ ಮಾಡಿದ್ದಾರೆ. ಹೀಗಿರುವಾಗ ಪ್ರಧಾನಿ ಮೋದಿ ಸುಪ್ರೀಂ ಅಲ್ಲದೇ ಬೇರೇನು? ಎಂದು ಪ್ರಶ್ನಿಸಿದ್ದಾರೆ.
ಮೋದಿಯವರನ್ನು ದೇಶದ ಜನರು ಮೆಚ್ಚಿರುವುದನ್ನು ಕಾಂಗ್ರೆಸ್ ಗೆ ಸಹಿಸಿಕೊಳ್ಳಲಾಗುತ್ತಿಲ್ಲ. ರಾಜ್ಯದ ಇಬ್ಬರು ಸಚಿವರು ದಿನ ಬೆಳಗಾದರೆ ಕಾ ಕಾ ಅಂತಾರೆ. ಅದರಲ್ಲಿಯೂ ಸಚಿವ ಸಂತೋಷ್ ಲಾಡ್ ಅವರಿಗೆ ಮೋದಿಯವರನ್ನು ಟೀಕಿಸದಿದ್ದರೆ ಆಗಲ್ಲ. ಮರಾಠಾ ಸಮುದಾಯದ ಸಂತೋಷ್ ಲಾಡ್ ಅವರಿಗೆ ಬಾಯಲ್ಲಿ ಶಿವಾಜಿ ರೀತಿ ದೇಶಭಕ್ತಿಯ ಮಾತುಬರುತ್ತಿಲ್ಲ ಬದಲಾಗಿ ಅಬ್ದುಲ್ ಖಾನ್ ರೀತಿ ಮಾತು ಬರುತ್ತಿದೆ ಎಂದು ಕಿಡಿಕಾರಿದರು.
ಸಚಿವ ಸಂತೋಷ್ ಲಾಡ್ ಅವರಿಗೆ ಮೈತುಂಬಾ ಮೈನಿಂಗ್ ದುಡ್ದು ಅಂಟಿಕೊಂಡಿದೆ. ಹೊರಗಡೆ ತಮ್ಮನ್ನು ದೊಡ್ಡ ಮೇಧಾವಿ ಥರ ಬಿಂಬಿಸಿಕೊಳ್ತಾರೆ. ಸಚಿವರೇ ಕಾರ್ಮಿಕ ಇಲಾಖೆಯ ಹೆಲ್ತ್ ಕಿಟ್ ಕಥೆ ಏನಾಯ್ತು? ಪ್ರಧಾನಿ ಮೋದಿಯವರಿಗೆ ಹೇಳಿಕೊಡುವಷ್ಟು ನೀವು ಬುದ್ಧಿವಂತರಾ? ಎಂದು ವಾಗ್ದಾಳಿ ನಡೆಸಿದ್ದಾರೆ.
ಸಂತೋಷ್ ಲಾಡ್ ಅವರು ಪರಿಜ್ಞಾನ ಇಟ್ಟುಕೊಂಡು ಮಾತನಾಡಬೇಕು. ಪಹಲ್ಗಾಮ್ ನಿಂದ ಕನ್ನಡಿಗರನ್ನು ಕರೆತರಲು ಅವಕಾಶ ಮಾಡಿಕೊಟ್ಟಿದ್ದು ಮೋದಿಯವರು. ಅದರಲ್ಲಿ ನಿಮ್ಮ ಸಾಧನೆಯೇನಿದೆ? ನಿಮ್ಮ ಅನಿಷ್ಠಕ್ಕೆಲ್ಲ ಮೋದಿ ಕಾರಣ ಎಂಬಂತೆ ಯಾಕೆ ಮಾತನಾಡುತ್ತೀರಿ? ಪಾಕಿಸ್ತಾನ ಮಾತ್ರ ನಮಗೆ ಶತೃವಲ್ಲ, ನಮ್ಮ ಜೊತೆಯಲ್ಲಿಯೇ ಇಂಥಹ ಹಿತ ಶತೃಗಳಿದ್ದಾರೆ. ಸಂತೋಷ್ ಲಾಡ್ ಅವರಿಗೆ ಮೈತುಂಬಾ ಮೈನಿಂಗ್ ದುಡ್ದು ಅಂಟಿಕೊಂಡಿದೆ. ಆದರೆ ತಾನು ಸಾಚಾ ಎಂಬಂತೆ ಪೋಸು ಕೊಡ್ತಾರೆ ಎಂದು ವಾಗ್ದಾಳಿ ನಡೆಸಿದರು.