ಮೈಸೂರು: ರಾಜ್ಯ ಸರ್ಕಾರ ಧರ್ಮಸ್ಥಳವನ್ನು ಕಬಳಿಸಲು ಪ್ರಯತ್ನಿಸುತ್ತಿದೆ ಎಂದು ಮಾಜಿ ಸಂಸದ ಪ್ರತಾಪ್ ಸಿಂಹ ಆರೋಪಿಸಿದ್ದಾರೆ.
ಮೈಸೂರಿನಲ್ಲಿ ಮಾತನಾಡಿರುವ ಪ್ರತಾಪ್ ಸಿಂಹ, ಸರ್ಕಾರ ಧರ್ಮಸ್ಥಳದ ಧರ್ಮಾಧಿಕಾರಿಯನ್ನು ಆರೋಪಿ ಎಂದು ತೀರ್ಮಾನಿಸಿ ಅದಕ್ಕೆ ಬೇಕಾದ ಸಾಕ್ಷಿಯನ್ನು ಈಗ ಹುಡುಕುತ್ತಿದೆ. ಸೌಜನ್ಯ ಪ್ರಕರಣಕ್ಕೂ ಈಗ ನಡೆಯುತ್ತಿರುವ ಅಸ್ಥಿ ಹುಡುಕಾಟಕ್ಕೂ ಸಂಬಂಧವೇ ಇಲ್ಲ. ಸರ್ಕಾರ ಧರ್ಮಸ್ಥಳವನ್ನು ಕಬಳಿಸಲು ಪ್ರಯತ್ನಿಸುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಧರ್ಮಸ್ಥಳದಲ್ಲಿ ಸಾವಿರಾರು ಕೊಲೆಯಾಗಿದೆ ಎನ್ನುತ್ತಿದ್ದಾರೆ. ಇದು ವಾಸ್ತವದಲ್ಲಿ ಸಾಧ್ಯವೇ? ನೂರಾರು ಕೊಲೆ ಮಾಡಿದಸಲು ಧರ್ಮಸ್ಥಳ ಧರ್ಮಾಧಿಕಾರಿ ಏನು ದಾವೂದ್ ಇಬ್ರಾಹಿಂ ನಾ? ಧರ್ಮಸ್ಥಳವನ್ನು ಟಾರ್ಗೆಟ್ ಮಾಡಲಾಗುತ್ತಿದೆ. ಇದರ ಹಿಂದೆ ವ್ಯವಸ್ಥಿತ ಪಿತೂರಿ ಇದೆ ಎಂದು ಆರೋಪಿಸಿದರು.
ಒಂದೇ ಒಂದು ಸಾಕ್ಷಿ ಇಲ್ಲದೇ ಯಾಕೆ ವೀರೇಂದ್ರ ಹೆಗ್ಗಡೆ ಅವರನ್ನು ಆರೋಪಿ ಸ್ಥಾನಕ್ಕೆ ತರಲಾಗಿದೆ? ಆರೋಪಿಯನ್ನು ಮೊದಲೇ ನಿರ್ಧರಿಸಿ ಅದಕ್ಕೆ ಬೇಕಾದ ಸಾಕ್ಷಿ ಹುಡುಕುತ್ತಿರುವ ಮೊದಲ ಪ್ರಕರಣ ಇದು ಎಂದು ವಾಗ್ದಾಳಿ ನಡೆಸಿದರು.
ಧರ್ಮಸ್ಥಳದ ಬಗ್ಗೆ ಅಪನಂಬಿಕೆ ಮೂಡಿಸುವ ಕೆಲಸವನ್ನು ಇಸ್ಲಾಂ ಧರ್ಮದ ಯಾವನೋ ಒಬ್ಬ ಮಾಡುತ್ತಿದ್ದಾನೆ. ಅದನ್ನು ಹಿಂದೂಗಳು ನಂಬುತ್ತಿದ್ದಾರೆ. ಹಿಂದೂ ಸಮಾಜ ಪ್ರಜ್ಞಾವಂತಿಕೆ ಕಳೆದುಕೊಂಡಿದ್ದು ಧರ್ಮಸ್ಥಳವನ್ನು ಟಾರ್ಗೆಟ್ ಮಾಡಿರುವುದು ಸಮಾಜಕ್ಕೆ ಅರ್ಥವಾಗುತ್ತಿಲ್ಲ. ಮೊದಲು ಅನಾಮಿಕನ ಪೂರ್ವಾಪರ ಬಹಿರಂಗವಾಗಬೇಕು ಎಂದು ಆಗ್ರಹಿಸಿದರು.