ಬೆಳಗಾವಿ: ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಚರ್ಚೆ ಸದ್ಯಕ್ಕೆ ಮುಗಿಯುವ ಲಕ್ಷಣಗಳು ಕಾಣುತ್ತಿಲ್ಲ. ಒಂದೆಡೆ ಡಿ.ಕೆ.ಶಿವಕುಮಾರ್ ಸಿಎಂ ಆಗಲಿ ಎಂದು ಬೆಂಬಲಿಗರು ಘೋಷಣೆ ಕೂಗುತ್ತಿದ್ದರೆ, ಮತ್ತೊಂದೆಡೆ ಪರಮೇಶ್ವರ್ ಮುಂದಿನ ಮುಖ್ಯಮಂತ್ರಿಯಾಗಲಿ ಎಂಬ ಘೋಷಣೆ ಆರಂಭವಾಗಿದೆ. ಈ ನಡುವೆ ಸಿದ್ದರಾಮಯ್ಯನವರೇ ಸಿಎಂ ಆಗಿ ಮುಂದುವರೆಯಲಿ ಎಂದು ಹಲವರು ಹೇಳಿಕೆ ನೀಡಲಾರಂಭಿಸಿದಾರೆ.
ವಾಲ್ಮೀಕಿ ಪೀಠದ ರಾಜನಹಳ್ಳಿ ಪ್ರಸನ್ನಾನಂದ ಸ್ವಾಮೀಜಿ, ಸಿದ್ದರಾಮಯ್ಯನವರೇ ಸಿಎಂ ಆಗಿ ಮುಂದುವರೆಯಲಿ ಎಂದಿದ್ದಾರೆ. ಸಿದ್ದರಾಮಯ್ಯ ಮುಂದುವರೆದರೆ ವಾಲ್ಮೀಕಿ ಸಮಾಜದ ಶಾಸಕರ ವಿರೋಧವಿಲ್ಲ. ಹಿಂದುಳಿದ ವರ್ಗಗಳ ವಿರೋಧವೂ ಇಲ್ಲ ಅವೇ ಮುಂದುವರೆದರೆ ಒಳ್ಳೆಯದು ಎಂದಿದ್ದಾರೆ.
ಬೆಳಗಾವಿ ನಗರದಲ್ಲಿ ಮಾತನಾಡಿದ ಪ್ರಸನ್ನಾನಂದ ಸ್ವಾಮೀಜಿ, ಪ್ರತಿ ವರ್ಷದಂತೆ ವಾಲ್ಮೀಕಿ ಪೀಠದ ರಾಜನಹಳ್ಳಿ ಮಠದಿಂದ ವಾಲ್ಮೀಕಿ ಜಯಂತಿ ಮಾಡುತ್ತೇವೆ. ಹೀಗಾಗಿ ಸಚಿವ ಸತೀಶ ಜಾರಕಿಹೋಳಿ ಸಭೆಗೆ ಆಗಮಿಸಿದ್ದರು. ಅಧಿವೇಶನದಲ್ಲಿ ಬಹುತೇಕ ನಮ್ಮ ಎಲ್ಲ ಸಮೂದಾಯದ ನಾಯಕರು ಬಂದಿರುತ್ತಾರೆ. ಹೀಗಾಗಿ ಜಾತ್ರೆಯ ಬಗ್ಗೆ ಚರ್ಚಿಸಲು ಸಭೆ ಕರೆಯಲಾಗಿತ್ತು. ಇಂದು ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ಜಾತ್ರೆಗೆ ಆಹ್ವಾನಿಸುತ್ತೇವೆ. ಸಿಎಂ ಭೇಟಿ ವೇಳೆ ನಮ್ಮ ಸಮುದಾಯಕ್ಕೆ ಎರಡು ಸಚಿವ ಸ್ಥಾನ ನೀಡಬೇಕೆಂದು ಮನವಿ ಮಾಡುತ್ತೇವೆ ಎಂದರು.
ಸಿಎಂ ಸಿದ್ದರಾಮಯ್ಯ ಸಿಎಂ ಆಗಿ ಮುಂದುವರೆದರೆ ವಾಲ್ಮೀಕಿ ಸಮಾಜದ ಶಾಸಕರು ಹಾಗೂ ಸಮಾಜದಿಂದ ಬೆಂಬಲವಿದೆ. ಒಂದು ವೇಳೆ ಬದಲಾಗುತ್ತಾರೆ ಎನ್ನುವುದಾದರೆ ದಲಿತರು ಸಿಎಂ ಆಗಬೇಕು ಎಂದು ಹೇಳುವ ಮೂಲಕ ಪರೋಕ್ಷವಾಗಿ ಡಿಸಿಎಂ ಡಿ.ಕೆ.ಶಿವಕುಮಾರ್ ಅವರಿಗೆ ಟಾಂಗ್ ನೀಡಿದ್ದಾರೆ.
