ಬೆಂಗಳೂರು: ಕೆ.ಆರ್.ನಗರದ ಮಹಿಳೆ ಮೇಲೆ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಜ್ವಲ್ ರೇವಣ್ಣಗೆ ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಜೀವನಪರ್ಯಂತ ಜೈಲು ಶಿಕ್ಷೆ ವಿಧಿಸಿದೆ ಎಂದು ವಿಶೇಷ ಅಭಿಯೋಜಕ ಬಿ.ಎನ್.ಜಗದೀಶ್ ತಿಳಿಸಿದ್ದಾರೆ.
ಕೋರ್ಟ್ ತೀರ್ಪಿನ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಬಿ.ಎನ್.ಜಗದೀಶ್, ಪ್ರಜ್ವಲ್ ರೇವಣ್ಣಗೆ ಜೀವಾವಧಿ ಹಾಗೂ ಜೀವನಪರ್ಯಂತ ಸೆರೆವಾಸ ವಿಧಿಸಲಾಗಿದೆ. ಜೀವಾವಧಿ ಶಿಕ್ಷೆ 14 ವರ್ಷ. ಆದರೆ ಜೀವನಪರ್ಯಂತ ಸೆರೆವಾಸದಲ್ಲಿ ಅವರು ಜೀವವಿರುವವರೆಗೂ ಜೈಲಿನಲ್ಲಿ ಇರಬೇಕಾಗುತ್ತದೆ ಎಂದು ತಿಳಿಸಿದರು.
ಜೀವನಪರ್ಯಂತ ಜೈಲುವಾಸದ ಜೊತೆಗೆ ಪ್ರಜ್ವಲ್ ಗೆ 11 ಲಕ್ಷದ 50 ಸಾವಿರ ರೂಪಾಯಿ ದಂಡ ವಿಧಿಸಲಾಗಿದೆ. ಅದರಲ್ಲಿ 11 ಲಕ್ಷದ 25 ಸಾವಿರ ರೂಪಾಯಿ ಸಂತ್ರಸ್ಥೆಗೆ ಪರಿಹಾರ ನಿಟ್ಟಿನಲ್ಲಿ ಪಾವತಿಸಬೇಕು ಎಂದು ತೀರ್ಪು ಪ್ರಕಟವಾಗಿದೆ ಎಂದು ಸ್ಪಷ್ಟಪಡಿಸಿದರು.
ವಾದ ಮಂಡನೆ ವೇಳೆ ಪ್ರಜ್ವಲ್ ಪರ ವಕೀಲರು ಸಂತ್ರಸ್ತೆಗೆ ಮದುವೆಯಾಗಿ ದೊಡ್ಡ ಮಕ್ಕಳಿದ್ದಾರೆ. ಹಾಗಾಗಿ ಆರೋಪಿಗೆ ಗರಿಷ್ಠ ಶಿಕ್ಷೆ, ದಂಡ ಪರಿಗಣಿಸಬೇಕಿಲ್ಲ ಎಂಬ ವಾದವನ್ನು ಮಂಡಿಸಿದರು. ಆರೋಪಿ ಪರ ವಕೀಲರ ಇಂತಹ ವಾದ ನಿಜಕ್ಕೂ ದುರದೃಷ್ಟಕರ. ಇಂತಹ ವಾದ ಸರಿಯಲ್ಲ, ಸಂತ್ರಸ್ತೆಯನ್ನು ಈ ರೀತಿ ಪರಿಗಣಿಸುವ ಅವಶ್ಯಕತೆಯಿಲ್ಲ. ಅತ್ಯಾಚಾರಕ್ಕೊಳಗಾದ ಮಹಿಳೆಗೆ ಮಾತ್ರ ಆಕೆ ಎದುರಿಸುತ್ತಿರುವ ಸಮಸ್ಯೆ, ಸಂಕಷ್ಟ, ಜೀವನದ ಸ್ಥಿತಿ ಗೊತ್ತಿರುತ್ತದೆ. ಇಂದಿಗೂ ಆ ಕುಟುಂಬ ಹೊರಬರಲಾಗದ ಸ್ಥಿತಿಯಲ್ಲಿದೆ. ಸಮಾಜವನ್ನು ಎದುರಿಸಲಾಗದ ಪರಿಸ್ಥಿತಿಯಲ್ಲಿದೆ. ಅಲ್ಲದೇ ಒಬ್ಬ ಪ್ರಭಾವಿ ವ್ಯಕ್ತಿಯಿಂದ ದೌರ್ಜನ್ಯಕ್ಕೊಳಗಾದ ಸಂತ್ರೆಯ ಸ್ಥಿತಿ ಊಹೆಗೂ ಸಾಧ್ಯವಿಲ್ಲ. ಈ ನಿಟ್ಟಿನಲ್ಲಿ ನಾವು ಸಮರ್ಥವಾಗಿ ವಾದ ಮಂಡಿಸಿದ್ದೇವೆ. ಅಂತಿಮವಾಗಿ ನ್ಯಾಯಾಲಯ ನಮ್ಮ ವಾದ ಪರಿಗಣಿಸಿ ಅಪರಾಧಿಗೆ ಗರಿಷ್ಠ ಶಿಕ್ಷೆ ವಿಧಿಸಿದೆ. ಪ್ರಜ್ವಲ್ ಗೆ ಜೀವನಪೂರ್ತಿ ಜೈಲುಶಿಕ್ಷೆ ವಿಧಿಸಲಾಗಿದೆ ಎಂದು ಹೇಳಿದರು.