ಹುಬ್ಬಳ್ಳಿ: ಒಬಿಸಿ ಸಲಹಾ ಮಂಡಳಿ ಅಧ್ಯಕ್ಷರನ್ನಾಗಿ ಸಿಎಂ ಸಿದ್ದರಾಮಯ್ಯ ಅವರನ್ನು ನೇಮಕ ಮಾಡಿರುವ ವಿಚಾರವಾಗಿ ವಿಪಕ್ಷ ಬಿಜೆಪಿ ನಾಯಕರು ಸಿಎಂ ಬದಲಾವಣೆ ಖಚಿತ ಎಂಬ ಅರ್ಥದಲ್ಲಿ ವ್ಯಂಗ್ಯವಾಡುತ್ತಿದ್ದಾರೆ. ಇದೇ ವಿಚಾರವಾಗಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಪ್ರತಿಕ್ರಿಯೆ ನೀಡಿದ್ದಾರೆ.
ಹುಬ್ಬಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಪ್ರಹ್ಲಾದ್ ಜೋಶಿ, ಒಬಿಸಿ ಸಲಹಾ ಮಂಡಳಿ ಅಧ್ಯಕ್ಷರನ್ನಾಗಿ ನೇಮಕ ಮಾಡುವ ಮೂಲಕ ಸಿಎಂ ಸಿದ್ದರಾಮಯ್ಯ ಅವರಿಗೆ ಪರೋಕ್ಷವಾಗಿ ಹೈಕಮಾಂಡ್ ಸೂಚನೆ ನೀಡಿದೆ. ಸಿಎಂ ಸ್ಥಾನ ತ್ಯಜಿಸಿ, ದೆಹಲಿಗೆ ಬನ್ನಿ ಎಂದು ಸಂದೇಶ ರವಾನಿಸಿದಂತಿದೆ ಎಂದಿದ್ದಾರೆ.
ಸಿದ್ದರಾಮಯ್ಯನವರಿಗೆ ಒಳ್ಳೆಯದಾಗಲಿ. ಇಲ್ಲೇ ಸಂಭಾಳಿಸಲು ಸದಹ್ಯವಾಗ್ತಿಲ್ಲ, ಇನ್ನು ಕೇಂದ್ರಕ್ಕೆ ಹೋಗಿ ಏನ್ ಮಾಡ್ತಾರೆ. ರಾಷ್ಟ್ರೀಯ ಹಿಂದುಳಿದ ವರ್ಗಕ್ಕೆ ಈಗ ಅಧ್ಯಕ್ಷರನ್ನು ನೇಮಕ ಮಾಡುವ ಉದ್ದೇಶ ಏನಿತ್ತು? ಡಿ.ಕೆ.ಶಿವಕುಮಾರ್ ಅವರು ಇಂಟರ್ನಲ್ ಆಗಿ ನಾನೇ ಮುಂದಿನ ಸಿಎಂ ಎಂದು ಸಾಕಷ್ಟು ಜನರಿಗೆ ಹೇಳುತ್ತಿದ್ದಾರೆ ಎಂದು ತಿಳಿಸಿದ್ದಾರೆ.