ನವದೆಹಲಿ: ಕೇಂದ್ರದಿಂದ ರಾಜ್ಯಕ್ಕೆ ₹ 4195 ಕೋಟಿ ಅನುದಾನ ಬಾಕಿಯಿದೆ ಎನ್ನುತ್ತ ಮುಖ್ಯಮಂತ್ರಿ ಸಿದ್ದರಾಮಯ್ಯ ಬೂಟಾಟಿಕೆ ಪ್ರದರ್ಶಿಸುತ್ತಿದ್ದಾರೆ ಎಂದು ಕೇಂದ್ರ ಆಹಾರ ಮತ್ತು ನಾಗರೀಕ ಸರಬರಾಜು ಸಚಿವ ಪ್ರಹ್ಲಾದ್ ಜೋಶಿ ವಾಗ್ದಾಳಿ ನಡೆಸಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ಸರ್ಕಾರದ ಆರ್ಥಿಕ ದುರುಪಯೋಗ, ಆಡಳಿತ ವೈಫಲ್ಯ, ಅಸಮರ್ಥತೆ ಒಪ್ಪಿಕೊಳ್ಳುವುದನ್ನು ಬಿಟ್ಟು ಕೇಂದ್ರದ ಮೇಲೆ ವೃಥಾ ಆರೋಪ ಹೊರಿಸುತ್ತಿದ್ದಾರೆ. ಸಿಎಂ ಜನರಿಗೆ ನೀಡಿದ ಭರವಸೆ ಈಡೇರಿಸುವಲ್ಲಿ ವಿಫಲರಾಗಿದ್ದಾರೆ ಎಂದು ಸಚಿವ ಜೋಶಿ ಖಂಡಿಸಿದ್ದಾರೆ.
ಕೇಂದ್ರದಿಂದ ಬಾಕಿ ಇರುವ ₹4,195 ಕೋಟಿ ಅನುದಾನದ ಬಗ್ಗೆ ದೂರು ನೀಡುವುದು ಸಿಎಂ ಸಿದ್ದರಾಮಯ್ಯ ಅವರ ಬೂಟಾಟಿಕೆ ಪ್ರದರ್ಶನವಾಗಿದೆ ಅಷ್ಟೇ. ಪಿಎಂಎವೈ (ಗ್ರಾಮೀಣ), ಸ್ವಚ್ಛ ಭಾರತ ಮಿಷನ್ (ನಗರ), ಅಮೃತ್, ಪೋಷಣ್, ಸಮಗ್ರ ಶಿಕ್ಷಾ ಮುಂತಾದ ಅನೇಕ ಪ್ರಮುಖ ಯೋಜನೆಗಳು ಸೇರಿದಂತೆ ವಿವಿಧ ಕೇಂದ್ರ ಪ್ರಾಯೋಜಿತ ಯೋಜನೆಗಳ ಅಡಿಯಲ್ಲಿ ₹5,000 ಕೋಟಿಗೂ ಹೆಚ್ಚು ಅನುದಾನ ಇನ್ನೂ ಹಾಗೇ ಇದ್ದು, ಮೊದಲು ಇದರ ಸಮರ್ಪಕ ಬಳಕೆ ಮಾಡಿಕೊಳ್ಳಲಿ ಎಂದರು.
ರಾಜ್ಯಕ್ಕೆ ಈಗಾಗಲೇ ನೀಡಿದ್ದ ಹಣ ಸಂಪೂರ್ಣ ಬಳಸಿಕೊಂಡಿದ್ದರೂ ಕೇಂದ್ರ ಅನುದಾನ ತಡೆಹಿಡಿದ ಯಾವುದಾದರೂ ನಿರ್ದಿಷ್ಟ ಯೋಜನೆಗಳಿದ್ದರೆ ಸಿಎಂ ಸ್ಪಷ್ಟಪಡಿಸಲಿ. ಅದು ಬಿಟ್ಟು ಹೋದಲ್ಲಿ ಬಂದಲ್ಲಿ ಕೇಂದ್ರ ಸರ್ಕಾರ ಹಣ ನೀಡಿಲ್ಲ ಎನ್ನುವುದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಾಕ್ಚಾಳಿಯಾಗಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.
ಕೇಂದ್ರದಿಂದ ಬಿಡುಗಡೆಯಾದ ಹಣವನ್ನು ಖರ್ಚು ಮಾಡುವಲ್ಲಿ ಸಹ ರಾಜ್ಯ ಸರ್ಕಾರ ವಿಫಲವಾಗಿದೆ. ಇನ್ನು, ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರೇ ಈ ಹಿಂದೆ ಕಾಂಗ್ರೆಸ್ನ ಜನಪ್ರಿಯ ಗ್ಯಾರಂಟಿಗಳಿಗೆ ₹40,000 ಕೋಟಿ ಮೀಸಲಿಡಬೇಕಾಗಿತ್ತು ಎಂಬುದನ್ನು ಒಪ್ಪಿಕೊಂಡಿದ್ದರು. ಇವರ ಸರ್ಕಾರದಲ್ಲಿ ಅಭಿವೃದ್ಧಿಗೆ ಯಾವುದೇ ಹಣ ಉಳಿದಿಲ್ಲ” ಎಂಬುದನ್ನು ಬಹಿರಂಗವಾಗೇ ಒಪ್ಪಿಕೊಂಡರು ಎಂದು ಲೇವಡಿ ಮಾಡಿದ್ದಾರೆ.
ರಾಜ್ಯ ಸರ್ಕಾರದಲ್ಲಿ ಸುಸ್ಥಿರವಲ್ಲದ ಗ್ಯಾರಂಟೆಗಳಿಗೆ ₹58,000 ಕೋಟಿ ಮೀಸಲಿಡಲಾಗಿದೆ ಎಂದು ಸಿಎಂ ಆರ್ಥಿಕ ಸಲಹೆಗಾರ ಬಸವರಾಜ ರಾಯರೆಡ್ಡಿ 2024ರ ಜನವರಿಯಲ್ಲೇ ಅಪಸ್ವರ ಎತ್ತಿದ್ದರು. ಇದು ಹಣಕಾಸಿನ ದುರುಪಯೋಗವನ್ನು ದೃಢಪಡಿಸುತ್ತದೆ ಎಂದಿದ್ದಾರೆ.
ಕಾಂಗ್ರೆಸ್ ಸರ್ಕಾರ ಕೇಂದ್ರದ ಮೇಲೆ ಆಧಾರ ರಹಿತ ಆರೋಪ ಮಾಡುವುದನ್ನು ನಿಲ್ಲಿಸಲಿ. ಮೊದಲು ತನ್ನ ಬಳಿ ಇರುವ ಗಣನೀಯ ಪ್ರಮಾಣದ ಹಣವನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳಲು ಗಮನ ನೀಡಲಿ ಎಂದು ಹೇಳಿದರು