ಹುಬ್ಬಳ್ಳಿ: ಕದನ ವಿರಾಮ ಘೋಷಣೆಯಾದ ಬಳಿಕವೂ ಪಾಕಿಸ್ತಾನ ಸೇನೆ ದಾಳಿ ಮುಂದುವರಿಸಿ ಇಬ್ಬಗೆ ನೀತಿ ಪ್ರದರ್ಶಿಸಿದೆ. ಇದಕ್ಕೆ ಭಾರತೀಯ ಸೇನೆ ತಕ್ಕ ಪ್ರತ್ಯುತ್ತರ ಕೊಡುತ್ತಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ತಿಳಿಸಿದ್ದಾರೆ.
ಹುಬ್ಬಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಪ್ರಹ್ಲಾದ್ ಜೋಶಿ, ಪಾಕ್ ವಿರುದ್ಧದ ದಾಳಿಗೆ ಕೇಂದ್ರ ಸರ್ಕಾರ ಸೇನೆಗೆ ಮುಕ್ತ ಅಧಿಕಾರ, ಸ್ವಾತಂತ್ರ್ಯ ನೀಡಿದೆ ಎಂದರು.
ಪಾಕಿಸ್ತಾನ ಯಾವತ್ತೂ ದ್ವಂದ್ವ ನಿಲುವು ಮತ್ತು ಇಬ್ಬಗೆ ನೀತಿ ಅನುಸರಿಸುವಲ್ಲಿ ಎತ್ತಿದ ಕೈ ಎಂಬುದು ಗೊತ್ತೇಯಿದೆ. ಅಲ್ಲದೇ, ಅಲ್ಲಿನ ಮಿಲಿಟರಿ ಪಡೆ ಚುನಾಯಿತ ಸರ್ಕಾರದ ಮಾತು ಕೇಳುವುದಿಲ್ಲ ಎಂಬುದು ಈಗ ಮತ್ತೊಮ್ಮೆ ಸಾಬೀತಾಗಿದೆ ಎಂದರು.
ಪಹಲ್ಗಾಮ್ ಭಯೋತ್ಪಾದನಾ ದಾಳಿಯ ನಂತರ ಗುಳ್ಳೇನರಿ ಬುದ್ಧಿಯ ಪಾಕಿಸ್ತಾನಕ್ಕೆ ಪಾಠ ಕಲಿಸಲು ನಮ್ಮ ಸರ್ಕಾರ ಭಾರತೀಯ ಸೇನೆಗೆ ಮುಕ್ತ ಅವಕಾಶ ನೀಡಿದೆ. ಅದರಂತೆ ಭಾರತೀಯ ಸೇನೆ ಪಾಕಿಸ್ತಾನಕ್ಕೆ ತೀಕ್ಷ್ಣ ಪ್ರತಿಕ್ರಿಯೆ, ಪ್ರತಿಕಾರದಲ್ಲಿ ತೊಡಗಿದೆ. ಬಹು ದೊಡ್ಡ ಸಂಖ್ಯೆಯಲ್ಲಿ ಭಯೋತ್ಪಾದಕರ ನೆಲೆಗಳನ್ನು ಧ್ವಂಸಗೊಳಿಸಿದೆ ಎಂದು ಹೇಳಿದರು.
ಭಾರತೀಯ ಸೇನೆ ಮೊದಲ ದಿನವೇ ಪಾಕಿಸ್ತಾನದ 9ಕ್ಕಿಂತ ಹೆಚ್ಚು ಭಯೋತ್ಪಾದಕರ ನೆಲೆಗಳನ್ನು ನಾಶಪಡಿಸಿದೆ. ಈ ದಾಳಿಯಿಂದಾಗಿ ದೊಡ್ಡ ಸಂಖ್ಯೆಯಲ್ಲಿ ಭಯೋತ್ಪಾದಕರು ಮತ್ತು ಭಯೋತ್ಪಾದಕ ಕುಟುಂಬಗಳು ಬಲಿಯಾಗಿವೆ. ಸಾಕಷ್ಟು ಭಯೋತ್ಪಾದಕ ಅಡಗುತಾಣಗಳು ಛಿದ್ರವಾಗಿವೆ. ಪ್ರಮುಖ ಉಗ್ರರು ಹತರಾಗಿದ್ದಾರೆ ಎಂದು ತಿಳಿಸಿದರು.
ದೇಶದಲ್ಲಿ ಭಯೋತ್ಪಾದನೆ ಸಂಪೂರ್ಣ ನಿರ್ಮೂಲನೆಗೆ ಪಣ ತೊಟ್ಟ ಕೇಂದ್ರ ಸರ್ಕಾರ ಇದೇ ಮೊದಲ ಬಾರಿಗೆ ಅತ್ಯಂತ ಕಠೋರ ನಿಲುವು ತೆಗೆದುಕೊಂಡಿದೆ. ಪಾಕ್ ಕದನ ವಿರಾಮಕ್ಕೂ ಮೊದಲೇ ಭಯೋತ್ಪಾದನೆಯನ್ನು ಯುದ್ಧವಾಗಿ ಪರಿಗಣಿಸುವಂತಹ ಅಭೂತಪೂರ್ವ ನಿರ್ಣಯ ಕೈಗೊಂಡಿದೆ ಎಂದು ಹೇಳಿದರು.
ಪಾಕಿಸ್ತಾನದ ಡಿಜಿಎಂಒ ಭಾರತದ ಮಿಲಿಟರಿ ಕಾರ್ಯಾಚರಣೆಗಳ ಮಹಾನಿರ್ದೇಶಕರಿಗೆ ಫೋನ್ ಮಾಡಿ ಕದನ ವಿರಾಮಕ್ಕೆ ವಿನಂತಿ ಮಾಡಿದ್ದರು. ಆದರೀಗ ಅದನ್ನು ಉಲ್ಲಂಘಿಸಿದ್ದಾರೆ. ಯಾವತ್ತೂ ಭಯೋತ್ಪಾದಕರು ಮತ್ತು ಭಯೋತ್ಪಾದಕ ಸಂಘಟನೆಗಳನ್ನು ಪೋಷಿಸಿಕೊಂಡು ಬಂದ ಪಾಕ್‌ಗೆ ಭಾರತೀಯ ಸೇನೆ ಪ್ರತ್ಯುತ್ತರ ಕೊಡುತ್ತದೆ ಎಂದು ಹೇಳಿದರು.
ಪಹಲ್ಗಾಮ್ ದಾಳಿಯ ನಂತರ ಇದೇ ಮೊದಲ ಬಾರಿ ಭಯೋತ್ಪಾದನೆ ವಿರುದ್ಧ ಇಡೀ ದೇಶವೇ ಒಂದಾಗಿ ಹೋರಾಡುತ್ತಿದೆ. ಭಾರತೀಯ ಸೇನೆ ಅತ್ಯಂತ ತೀಕ್ಷ್ಣ ಪ್ರತಿಕ್ರಿಯೆ ನೀಡಿದೆ. ಪ್ರತೀಕಾರದ ದಾಳಿಯಲ್ಲಿ ನಮ್ಮ ಕಂದಹಾರ ಪ್ರಕರಣದಲ್ಲಿದ್ದವರು ಮತ್ತು ಪ್ರಮುಖ ಉಗ್ರರನ್ನು, ಅವರ ಕುಟುಂಬಗಳು ಹತರಾಗಿದ್ದಾರೆ.
ಭಾರತ ಶಾಂತಿಪ್ರಿಯ ರಾಷ್ಟ್ರ. ಭಾರತೀಯರು ಯಾವತ್ತೂ ಶಾಂತಿಪ್ರಿಯರೇ, ನಾವಾಗಿಯೇ ಯಾವತ್ತೂ ಯಾರ ಮೇಲೂ ದಂಡೆತ್ತಿ ಹೋಗುವುದಿಲ್ಲ. ಆದರೆ, ನಮ್ಮ ಮೇಲೆ ಯಾರಾದರೂ ಬಂದರೆ ಸುಮ್ಮನೆ ಬಿಡುವ ಮಾತೇ ಇಲ್ಲ. ಭಾರತ-ಭಾರತೀಯರಿಗೆ ಅಂತದ್ದೊಂದು ಶಕ್ತಿಯಿದೆ ಎಂದು ಹೇಳಿದರು.