ಹುಬ್ಬಳ್ಳಿ: ಅತ್ಯಾಚಾರ ಪ್ರಕರಣದಲ್ಲಿ ಜೆಡಿಎಸ್ ಮಾಜಿ ಸಂಸದ ಪ್ರಜ್ವಲ್ ರೇವಣ್ಣಗೆ ಜೀವಾವಧಿ ಶಿಕ್ಷೆ ವಿಧಿಸಿ ಕೋರ್ಟ್ ತೀರ್ಪು ಪ್ರಕಟಿಸಿದ್ದು, ಇದರಿಂದ ಬಿಜೆಪಿಗೆ ಮುಜುಗರವಾಗಿಲ್ಲ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ತಿಳಿಸಿದ್ದಾರೆ.
ಹುಬ್ಬಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಪ್ರಜ್ವಲ್ ರೇವಣ್ಣಗೆ ಜೀವಾವಧಿ ಶಿಕ್ಷೆಯಾದರೆ ಬಿಜೆಪಿಗೆ ಯಾಕೆ ಮುಜುಗರವಾಗಬೇಕು. ತಪ್ಪು ಮಾಡಿದವರಿಗೆ ಶಿಕ್ಷೆಯಾಗಿದೆ. ನ್ಯಾಯಾಲಯ ಎಲ್ಲವನ್ನೂ ವಿಚಾರಣೆ ಮಾಡಿ ತೀರ್ಪು ನೀಡಿದೆ. ನ್ಯಾಯಾಲಯದ ತೀರ್ಪನ್ನು ಎಲ್ಲರೂ ಗೌರವಿಸಬೇಕು ಎಂದರು.
ಪ್ರಜ್ವಲ್ಗೆ ಜೀವಾವಧಿ ಶಿಕ್ಷೆಯಿಂದ ಬಿಜೆಪಿಗೆ ಮುಜುಗರವಾಗಿಲ್ಲ. ಪೊಲೀಸರು ತನಿಖೆ ಮಾಡಿದ್ದಾರೆ. ಕೋರ್ಟ್ ತೀರ್ಪು ನೀಡಿದೆ. ತಪ್ಪು ಮಾಡಿದವರಿಗೆ ಶಿಕ್ಷೆಯಾಗಿದೆ ಅಷ್ಟೇ. ಜೆಡಿಎಸ್ ವರದ್ದು ಪ್ರತ್ಯೇಕ ಪಕ್ಷ. ಆ ಪಕ್ಷದ ಜೊತೆ ನಮ್ಮ ಮೈತ್ರಿಯಿದೆ. ಪ್ರಜ್ವಲ್ ಎಷ್ಟು ಜನ ಅಪರಾಧಿಗಳ ಜೊತೆ ಇದ್ರು? ಎಂಬುದು ಗೊತ್ತು ಎಂದು ಹೇಳಿದರು.
ನಮ್ಮ ಬಗ್ಗೆ ಹೇಳಲು ಕಾಂಗ್ರೆಸ್ ನ ರಾಹುಲ್ ಗಾಂಧಿ ಎಂತೆಂತಹ ಅಪರಾಧಿಗಳ ಜೊತೆ ಫೋಟೋ ತೆಗೆಸಿಕೊಂಡಿದ್ದಾರೆ. ರಾಹುಲ್ ಗಾಂಧಿ ಖಲಿಸ್ತಾನಿ ಉಗ್ರರ ಜೊತೆ ಇರುವ ಫೋಟೋ ಇದೆ. ಈ ಬಗ್ಗೆ ಏನು ಹೇಳ್ತಾರೆ? ಎಂದು ಪ್ರಶ್ನಿಸಿದರು.