ಭೋಪಾಲ್: ಮದ್ಯಪ್ರದೇಶದ ರಾಜ್ಯ ಪೊಲೀಸ್ ಅಕಾಡೆಮಿಯಲ್ಲಿ ತರಬೇತಿ ಪಡೆಯುತ್ತಿರುವ ಪೊಲೀಸ್ ಕಾನ್ಸ್ ಟೇಬಲ್ ಗಳು ಪ್ರತಿದಿನ ಭಗವದ್ಗೀತೆಯನ್ನು ಓದಬೇಕು ಎಂದು ನಿರ್ದೇಶನ ನೀಡಲಾಗಿದೆ.
ಹೆಚ್ಚುವರಿ ಮಹಾನಿರ್ದೇಶ ರಾಜಬಾಬು ಸಿಂಗ್ ಹೊರಡಿಸಿದ ಆದೇಶದ ಪ್ರಕಾರ ಕಾನ್ಸ್ ಟೇಬಲ್ ಗಳು ಒಂದು ತಿಂಗಳ ಕಾಲ ಪ್ರತಿದಿನ ಭಗವದ್ಗೀತೆಯ ಒಂದು ಅಧ್ಯಾಯವನ್ನು ಓದಬೇಕು ಎಂದು ಸೂಚಿಸಲಾಗಿದೆ. ಈ ಆದೇಶ ಭಾರಿ ವಿವಾದಕ್ಕೆ ಕಾರಣವಾಗಿದೆ.
ಒಂಭತ್ತು ತಿಂಗಳ ಕಾಲ ಪೊಲೀಸ್ ಕಾನ್ಸ್ ಟೇಬಲ್ ಗಳು ತರಬೇತಿ ಪಡೆಯುತ್ತಾರೆ. ಈ ವೇಳೆ ದೈನಂದಿನ ಧ್ಯಾನದ ಅವಧಿಗಳ ಮೊದಲು ಗೀತಾ ಪಠಣಕ್ಕೆ ಅವಧಿ ನೀಡಲಾಗುವುದು. ಹೆಚ್ಚು ಆಧ್ಯಾತ್ಮಿಕ ಜೀವನ ನಡೆಸಲು ಹಾಗೂ ಶ್ರೀಕೃಷ್ಣನ ಬೋಧನೆಗಳಿಂದ ನೈತಿಕ ಮೌಲ್ಯಗಳನ್ನು ಅಳವಡಿಸಿಕೊಳ್ಳಲು ಸಹಾಯವಾಗಲಿದೆ ಎಂದು ಹೇಳಲಾಗಿದೆ.
ಈ ಆದೇಶದ ಬೆನ್ನಲ್ಲೇ ಮುಸ್ಲಿಂ ಸಂಘಟನೆಗಳು ಕುರಾನ್ ಓದಲು ತರಬೇತಿ ಕೇಂದ್ರದ ಅವಕಾಶ ನೀಡಬೇಕು ಎಂದು ಒತ್ತಾಯಿಸಿದೆ. ಇನ್ನೊಂದೆಡೆ ಕಾಂಗ್ರೆಸ್ ಪಕ್ಷ ಈ ಆದೇಶವನ್ನು ಟೀಕಿಸಿದೆ. ಇದು ಜ್ಯಾತ್ಯಾತೀತ ತತ್ವಗಳ ಉಲ್ಲಂಘನೆ. ಅಧಿಕಾರಿಗಳು ಬಿಜೆಪಿ ನಾಯಕರನ್ನು ಮೆಚ್ಚಿಸಲು ಮಾತ್ರ ಇಂತಹ ನಿರ್ದೇಶನಗಳನ್ನು ನೀಡುತ್ತಿದ್ದಾರೆ ಎಂದು ಕಿಡಿಕಾರಿದೆ.
