ಅನಾಮಧೇಯ ಕರೆ ಆಧರಿಸಿ ತನಿಖೆ ; ಕಳೆದ ವರ್ಷ ಮಾರಾಟವಾಗಿದ್ದ ಮಗು ಕೊನೆಗೂ ಪತ್ತೆ !

ಮಾನವೀಯತೆಯನ್ನೇ ಮರೆಸುವಂತಹ ಘಟನೆಯಲ್ಲಿ ಕಳೆದ ವರ್ಷ ಫೆಬ್ರವರಿಯಲ್ಲಿ ತಾಯಿಯಿಂದಲೇ 1.60 ಲಕ್ಷಕ್ಕೆ ಮಾರಾಟವಾಗಿದ್ದ 14 ದಿನಗಳ ಗಂಡು ಮಗುವನ್ನು ಬಳ್ಳಾರಿ ಗ್ರಾಮಾಂತರ ಠಾಣೆಯ ಪೊಲೀಸರು ರಕ್ಷಿಸಿದ್ದಾರೆ. ಮಗು ಆಂಧ್ರಪ್ರದೇಶದ ಅಲ್ಲೂರಿನಲ್ಲಿ ಪತ್ತೆಯಾಗಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಮಗುವನ್ನು ಖರೀದಿಸಿದ ನವೀನ್‌ಕುಮಾರ್ ಮತ್ತು ಮಗುವಿನ ತಾಯಿಯನ್ನು ಪೊಲೀಸರು ಬಂಧಿಸಿದ್ದಾರೆ. ಮಗುವನ್ನು ಸದ್ಯ ತಾಯಿಯ ಬಳಿ ಇರಿಸಲಾಗಿದೆ.

ಮಹಿಳೆಯು 2024ರ ಫೆಬ್ರವರಿಯಲ್ಲಿ ಬಳ್ಳಾರಿಯ ವಿಮ್ಸ್ ಆಸ್ಪತ್ರೆಯಲ್ಲಿ ಮಗುವಿಗೆ ಜನ್ಮ ನೀಡಿದ್ದಳು. ಅದೇ ತಿಂಗಳ 20ರಂದು 14 ದಿನಗಳ ಮಗುವನ್ನು ಬೇರೊಬ್ಬರಿಗೆ ಮಾರಾಟ ಮಾಡಿದ್ದಳು. ಈ ಬಗ್ಗೆ ಜಿಲ್ಲಾ ಮಕ್ಕಳ ರಕ್ಷಣಾ ಸಹಾಯವಾಣಿಗೆ 2024ರ ಆಗಸ್ಟ್ 5ರಂದು ಅನಾಮಧೇಯ ಕರೆ ಬಂದಿತ್ತು. ಕರೆ ಆಧರಿಸಿ ಅಧಿಕಾರಿಗಳು ಪರಿಶೀಲಿಸಿದಾಗ, ಮಗು ಮಾರಾಟವಾಗಿರುವುದು ಖಚಿತವಾಯಿತು.

ಪ್ರಕರಣ ದಾಖಲಿಸಿಕೊಂಡು, ತನಿಖೆ ಕೈಗೊಂಡ ಪೊಲೀಸರು ನವೀನ್‌ಕುಮಾರ್‌ನನ್ನು ಪತ್ತೆ ಮಾಡಿ ಬಂಧಿಸಿದ್ದಾರೆ. ನವೀನ್‌ಕುಮಾರ್ ವೃತ್ತಿಯ ಭಾಗವಾಗಿ ದಕ್ಷಿಣದ ರಾಜ್ಯಗಳಲ್ಲಿ ಓಡಾಡುತ್ತಿದ್ದ. ಮಹಿಳೆಗೆ ಅನಿವಾರ್ಯ ಕಾರಣಗಳಿಂದ ಮಗು ಬೇಕಿರಲಿಲ್ಲ. ಮಕ್ಕಳಿರದ ಕಾರಣ ನವೀನ್‌ಕುಮಾರ್ ಮಗುವನ್ನು ಖರೀದಿಸಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಪೊಲೀಸರು ಮಗುವನ್ನು ಆಂಧ್ರಪ್ರದೇಶದ ಅಲ್ಲೂರಿನಿಂದ ಕರೆ ತಂದಿದ್ದಾರೆ. ಪ್ರಕರಣದ ತನಿಖೆ ಮುಂದುವರಿದಿದೆ.
ಈ ಪ್ರಕರಣವು ಮಗು ಮಾರಾಟ ಜಾಲದ ಗಂಭೀರ ಸ್ವರೂಪವನ್ನು ಎತ್ತಿ ತೋರಿಸುತ್ತದೆ. ತಾಯಿಯೇ ತನ್ನ ಮಗುವನ್ನು ಹಣಕ್ಕಾಗಿ ಮಾರಾಟ ಮಾಡಿರುವುದು ಸಮಾಜಕ್ಕೆ ಆಘಾತವನ್ನುಂಟು ಮಾಡಿತ್ತು. ಪೊಲೀಸರ ಸಮಯೋಚಿತ ಕಾರ್ಯಾಚರಣೆಯಿಂದ ಮಗು ಸುರಕ್ಷಿತವಾಗಿ ಪತ್ತೆಯಾಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read