ಪ್ರವಾಹ ಸ್ಥಳ ಪರಿಶೀಲನೆಗೆ ತೆರಳಿದ್ದ ಬಿಜೆಪಿ ಸಂಸದ, ಶಾಸಕನ ಮೇಲೆ ಮಾರಣಾಂತಿಕ ಹಲ್ಲೆ: ಪ್ರಧಾನಿ ಮೋದಿ ಖಂಡನೆ

ಕೊಲ್ಕತ್ತಾ: ಪಶ್ಚಿಮ ಬಂಗಾಳದ ಜಲ್ಪೈಗುರಿ ಜಿಲ್ಲೆಯಲ್ಲಿ ಪ್ರವಾಹ ಪೀಡಿತ ನಾಗರಕಟ ಪ್ರದೇಶದಲ್ಲಿ ಪರಿಶೀಲನೆಗೆ ತೆರಳಿದ್ದ ಬಿಜೆಪಿ ಸಂಸದ ಮತ್ತು ಶಾಸಕರೊಂದಿಗೆ ಸ್ಥಳೀಯರು ಗಲಾಟೆ ಮಾಡಿ ಕಲ್ಲುಗಳಿಂದ ಹೊಡೆದು ಗಾಯಗೊಳಿಸಿದ್ದಾರೆ.

ಮಾಲ್ಡಾ ಉತ್ತರ ಕ್ಷೇತ್ರದ ಸಂಸದ ಖಗೇನ್ ಮುರ್ಮು ತಲೆಗೆ ಪೆಟ್ಟಾಗಿದ್ದು, ಸಿಲಿಗುರಿ ಶಾಸಕ ಶಂಕರ್ ಘೋಷ್ ಕೂಡ ಗಾಯಗೊಂಡಿದ್ದಾರೆ. ಇಬ್ಬರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಸಂಸದ ಮುರ್ಮು ತಲೆಗೆ ಗಾಯವಾಗಿ ರಕ್ತಸ್ರಾವವಾಗಿದೆ. ಸ್ಥಳೀಯರು ನಮಗೆ ಹೊಡೆದು ಥಳಿಸಿದ್ದಾರೆ. ಕಲ್ಲುಗಳನ್ನು ಎಸೆದಿದ್ದಾರೆ ಎಂದು ಶಾಸಕ ಘೋಷ್ ಮಾಹಿತಿ ಹಂಚಿಕೊಂಡಿದ್ದಾರೆ.

ಟಿಎಂಸಿಯ ಜಂಗಲ್ ರಾಜ್ ಪಶ್ಚಿಮ ಬಂಗಾಳದಲ್ಲಿ ಮುಂದುವರೆದಿದೆ ಎಂದು ಬಿಜೆಪಿ ಘಟನೆಯನ್ನು ಖಂಡಿಸಿದೆ. ಮಳೆ, ಪ್ರವಾಹ, ಭೂಕುಸಿತದ ಬಳಿಕ ಪರಿಹಾರ ಮತ್ತು ರಕ್ಷಣಾ ಕಾರ್ಯಗಳಿಗೆ ನೆರವಾಗಲು ತೆರಳಿದ್ದ ಸಂಸದ ಮುರ್ಮು ಮೇಲೆ ಟಿಎಂಸಿ ಗೂಂಡಾಗಳು ದಾಳಿ ಮಾಡಿದ್ದಾರೆ ಎಂದು ಬಿಜೆಪಿ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವೀಯಾ ಆರೋಪಿಸಿದ್ದಾರೆ.

ಸಂಸದ, ಶಾಸಕರ ಮೇಲಿನ ದಾಳಿ ಘಟನೆಯನ್ನು ಪ್ರಧಾನಿ ಮೋದಿ ಖಂಡಿಸಿದ್ದಾರೆ. ಪಶ್ಚಿಮ ಬಂಗಾಳದಲ್ಲಿ ಪ್ರವಾಹ ಮತ್ತು ಭೂಕುಸಿತದಿಂದ ಪೀಡಿತ ಜನರಿಗೆ ಸೇವೆ ಸಲ್ಲಿಸಿದ್ದಕ್ಕಾಗಿ ಹಾಲಿ ಸಂಸದ ಮತ್ತು ಶಾಸಕ ಸೇರಿದಂತೆ ನಮ್ಮ ಪಕ್ಷದ ಸಹೋದ್ಯೋಗಿಗಳ ಮೇಲೆ ಹಲ್ಲೆ ನಡೆಸಿದ ರೀತಿ ಸಂಪೂರ್ಣವಾಗಿ ಭಯಾನಕವಾಗಿದೆ. ಇದು ಟಿಎಂಸಿಯ ಅಸಂವೇದನಾಶೀಲತೆಯನ್ನು ಹಾಗೂ ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆಯ ಸಂಪೂರ್ಣ ದಯನೀಯ ಸ್ಥಿತಿಯನ್ನು ಎತ್ತಿ ತೋರಿಸುತ್ತದೆ ಎಂದು ಹೇಳಿದ್ದಾರೆ.

ಇಂತಹ ಸವಾಲಿನ ಪರಿಸ್ಥಿತಿಯಲ್ಲಿ ಪಶ್ಚಿಮ ಬಂಗಾಳ ಸರ್ಕಾರ ಮತ್ತು ಟಿಎಂಸಿ ಹಿಂಸಾಚಾರದಲ್ಲಿ ತೊಡಗಿಸಿಕೊಳ್ಳುವ ಬದಲು ಜನರಿಗೆ ಸಹಾಯ ಮಾಡುವತ್ತ ಹೆಚ್ಚು ಗಮನಹರಿಸಬೇಕೆಂದು ನಾನು ಬಯಸುತ್ತೇನೆ. ಬಿಜೆಪಿ ಕಾರ್ಯಕರ್ತರು ಜನರ ನಡುವೆ ಕೆಲಸ ಮಾಡುವುದನ್ನು ಮುಂದುವರಿಸಲು ಮತ್ತು ನಡೆಯುತ್ತಿರುವ ರಕ್ಷಣಾ ಕಾರ್ಯಾಚರಣೆಗಳಿಗೆ ಸಹಾಯ ಮಾಡಲು ನಾನು ಕರೆ ನೀಡುತ್ತೇನೆ ಎಂದು ಮೋದಿ ತಿಳಿಸಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read