ಬೆಂಗಳೂರು: ಎಲ್ಲೆಡೆ ಬೆಳಕಿನ ಹಬ್ಬ ದೀಪಾವಳಿ ಸಡಗರ-ಸಂಭ್ರಮ ಮನೆ ಮಾಡಿದೆ. ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಪಟಾಕಿ ಶಬ್ಧಗಳು ಜೋರಾಗಿವೆ. ದೀಪಾವಳಿ ಪಟಾಕಿ ಅವಘಡದಿಂದಾಗಿ 40 ಜನರು ಗಾಯಗೊಂಡಿರುವ ಘಟನೆ ನಡೆದಿದೆ.
ಪಟಾಕಿ ಹೊಡೆಯುವವರು ಮಾತ್ರವಲ್ಲ ಪಟಾಕಿ ಸಿಡಿಸುವುದನ್ನು ನೋಡಲು ಹೋಗಿದ್ದ ಮಕ್ಕಳು, ಯುವಕರು ಕೂಡ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ. ನಿನ್ನೆ 13 ಜನರು ಆಸ್ಪತ್ರೆಗೆ ದಾಖಲಾಗಿದ್ದರು. ನಿನ್ನೆಯಿಂದ ಈವರೆಗೆ ಬೆಂಗಳೂರಿನಲ್ಲಿ ಪಟಾಕಿ ಸಿಡಿತಕ್ಕೆ 41 ಜನರು ಗಾಯಗೊಂಡಿದ್ದು, ವಿವಿಧ ಆಸ್ಪತ್ರೆಗಳಿಗೆ ದಾಖಲಾಗಿದ್ದಾರೆ.
ಬೆಂಗಳೂರಿನ ಮಿಂಟೋ ಕಣ್ಣಿನ ಆಸ್ಪತ್ರೆಯಲ್ಲಿ 13 ಜನರು ದಾಖಲಾಗಿದ್ದಾರೆ. ಪಟಾಕಿ ಸಿಡಿದು 20 ವರ್ಷದ ಓರ್ವ ಯುವಕ ಕಣ್ಣಿನ ದೃಷ್ಟಿ ಕಳೆದುಕೊಂಡಿದ್ದಾನೆ. ಬೆಂಗಳೂರಿನ ಅಕ್ಕಿಪೇಟೆ ನಿವಾಸಿ ಯುವಕನ ಕಣ್ಣಿನ ದೃಷ್ಟಿ ಸಂಪೂರ್ಣ ಹಾನಿಯಾಗಿದೆ ಎಂದು ತಿಳಿದುಬಂದಿದೆ.