ಬೆಂಗಳೂರು: ಬೆಂಗಳೂರಿನಿಂದ ವಾರಣಾಸಿಗೆ ತೆರಳುತ್ತಿದ್ದ ಏರ್ ಇಂಡಿಯಾ ಎಕ್ಸ್ ಪ್ರೆಸ್ ವಿಮಾನದಲ್ಲಿ ಪ್ರಯಾಣಿಕನೊಬ್ಬ ಆಕಸ್ಮಿಕವಾಗಿ ಕಾಕ್ ಪಿಟ್ ಪ್ರವೇಶಿಸಲು ಯತ್ನಿಸಿದ ಘಟನೆ ನಡೆದಿದೆ.
ಈ ಬಗ್ಗೆ ವಿಮಾನದ ಪೈಲಟ್ ಸಿದ್ದಾರ್ಥ್ ಶರ್ಮಾ ಎಟಿಸಿಗೆ ಸಂದೇಶ ನೀಡಿದ್ದು, ತನಿಖೆ ಕೈಗೊಳ್ಳಲಾಗಿದೆ. ಏರ್ ಇಂಡಿಯಾ ಎಕ್ಸ್ಪ್ರೆಸ್ ವಿಮಾನದಲ್ಲಿ ಮಣಿ ಎಂಬ ಪ್ರಯಾಣಿಕ ಕಾಕ್ ಪಿಟ್ ಬಾಗಿಲಿನ ಬಳಿ ಬಟನ್ ಒತ್ತಿದ್ದಾನೆ. ಆತನನ್ನು ವಿಚಾರಿಸಿದಾಗ ಮೊದಲನೇ ಬಾರಿಗೆ ವಿಮಾನದಲ್ಲಿ ಪ್ರಯಾಣಿಸುತ್ತಿದ್ದು, ಈ ಬಗ್ಗೆ ನನಗೆ ತಿಳಿದಿಲ್ಲ ಎಂದು ಹೇಳಿದ್ದಾನೆ. ಸಿಐಎಸ್ಎಫ್ ಸಿಬ್ಬಂದಿ ವಿಚಾರಣೆಗಾಗಿ ವಶಕ್ಕೆ ಪಡೆದು ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಪ್ರಯಾಣಿಕ ಮಣಿ ಶೌಚಾಲಯ ಹುಡುಕುತ್ತಾ ಆಕಸ್ಮಿಕವಾಗಿ ಕಾಕ್ ಪಿಟ್ ಬಳಿ ಬಂದು ಬಟನ್ ಒತ್ತಿದ್ದಾನೆ ಎನ್ನುವುದು ವಿಚಾರಣೆಯ ವೇಳೆ ಗೊತ್ತಾಗಿದೆ. ಈ ಬಗ್ಗೆ ತನಿಖೆ ನಡೆಸಲಾಗಿದೆ ಎಂದು ಏರ್ ಇಂಡಿಯಾ ವಕ್ತಾರರು ಹೇಳಿದ್ದಾರೆ.
ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್ 2ರಿಂದ ಬೆಳಿಗ್ಗೆ 8 ಗಂಟೆಗೆ ಟೇಕಾಫ್ ಆಗಿದ್ದ ವಿಮಾನವು 10:27 ಕ್ಕೆ ವಾರಣಾಸಿಯಲ್ಲಿ ಲ್ಯಾಂಡ್ ಆಗಿದೆ. ಪ್ರಯಾಣದ ನಡುವೆ ಪ್ರಯಾಣಿಕ ಮಣಿ ಎಂಬಾತ ಶೌಚಾಲಯ ಹುಡುಕಿಕೊಂಡು ಕಾಕ್ ಪಿಟ್ ಬಳಿ ತೆರಳಿದ್ದಾರೆ. ಆದರೆ ಅಪಹರಣದ ಪ್ರಯತ್ನವಾಗಿರಬಹುದು ಎಂದು ಶಂಕಿಸಿ ಪೈಲಟ್ ಬಾಗಿಲು ತೆರೆಯಲಿಲ್ಲ. ವಿಮಾನ ಲ್ಯಾಂಡ್ ಆದ ಕೂಡಲೇ ಸಂಬಂಧಿಸಿದ ಅಧಿಕಾರಿಗಳಿಗೆ ಮಾಹಿತಿ ನೀಡಲಾಗಿದೆ. ಮಣಿ ವಶಕ್ಕೆ ಪಡೆದು ವಿಚಾರಿಸಿದಾಗ ಶೌಚಾಲಯ ಹುಡಕಿ ಕಾಕ್ ಪಿಟ್ ಬಳಿ ಬಂದಿರುವುದು ಗೊತ್ತಾಗಿದೆ.