ಶಿವಮೊಗ್ಗ : ಮಾರ್ಚ್ 3 ರಂದು ಶಿವಮೊಗ್ಗ ತಾಲ್ಲೂಕಿನ ಎಲ್ಲ 0 ಯಿಂದ 5 ವರ್ಷದೊಳಗಿನ ಮಕ್ಕಳಿಗೆ ಕಡ್ಡಾಯವಾಗಿ ಪಲ್ಸ್ ಪೋಲಿಯೋ ಲಸಿಕೆ ಹಾಕಿಸಬೇಕೆಂದು ತಹಶೀಲ್ದಾರ್ ಗಿರೀಶ್ ತಿಳಿಸಿದರು.
ತಹಶೀಲ್ದಾರ್ ಕಚೇರಿಯಲ್ಲಿ ನಡೆದ ಶಿವಮೊಗ್ಗ ತಾಲ್ಲೂಕು ಟಾಸ್ಕ್‍ಫೋರ್ಸ್ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ರಸ್ತೆ ಕೆಲಸ, ಕಲ್ಲು ಕ್ವಾರೆ, ಕುರಿ ಕಾಯುವವರು, ಇಟ್ಟಿಗೆ ಗೂಡು, ವಲಸೆ ಬಂದವರು ಹೀಗೆ ಯಾವುದೇ ಮಕ್ಕಳು ಲಸಿಕೆಯಿಂದ ವಂಚಿತರಾಗದಂತೆ ಎಲ್ಲ 0 ಯಿಂದ 5 ವರ್ಷದೊಳಗಿನ ಮಕ್ಕಳಿಗೆ ಪೋಲಿಯೋ ಹನಿ ಹಾಕುವಂತೆ ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದ ಅವರು ಈ ಬಗ್ಗೆ ಹೆಚ್ಚಿನ ಪ್ರಚಾರ ಮತ್ತು ಅರಿವು ಮೂಡಿಸಲು ನಗರ ಮತ್ತು ಗ್ರಾಮಾಂತರ ಪ್ರದೇಶದಲ್ಲಿ ಕಸದ ವಾಹನಗಳಲ್ಲಿ, ಧ್ವನಿ ವರ್ಧಕಗಳ ಮುಖಾಂತರ ಜನರಲ್ಲಿ ಅರಿವು ಮಾಡಿಸುವಂತೆ ತಿಳಿಸಿದರು.
ರಾಷ್ಟ್ರೀಯ ಜಂತು ಹುಳು ನಿವಾರಣೆ ಕಾರ್ಯಕ್ರಮ :
ಫೆ.27 ರಂದು 1 ವರ್ಷದಿಂದ 19 ವರ್ಷದೊಳಗಿನ ಅಂಗನವಾಡಿ, ಶಾಲಾ-ಕಾಲೇಜು, ಹಾಗೂ ಶಾಲೆ ಬಿಟ್ಟ ಮಕ್ಕಳಿಗೆ ಜಂತುಹುಳು ನಿವಾರಣೆ ಮಾತ್ರೆಗಳನ್ನು ಉಚಿತವಾಗಿ ನೀಡಲಾಗುವುದು. ಜಂತುಹುಳು ನಿವಾರಕ ಮಾತ್ರೆ(ಆಲ್ಬೆಂಡಜಾಲ್) ನೀಡುವುದರಿಂದ ಮಕ್ಕಳಲ್ಲಿನ ಅಪೌಷ್ಟಿಕತೆ ಮತ್ತು ರಕ್ತಹೀನತೆ ತಡೆಗಟ್ಟಬಹುದಾಗಿದೆ. ಜೊತೆಗೆ ವೈಯಕ್ತಿಕ ಸ್ವಚ್ಚತೆ, ಕೈ ತೊಳೆಯುವ ವಿಧಾನಗಳ ಬಗ್ಗೆ ಅಂಗನವಾಡಿ, ಶಾಲೆಗಳಲ್ಲಿ ಆರೋಗ್ಯ ಶಿಕ್ಷಣ ನೀಡುವಂತೆ ಎಲ್ಲಾ ಆರೋಗ್ಯ ಸಿಬ್ಬಂದಿಗಳಿಗೆ ಸೂಚನೆ ನೀಡಿದರು.
ಆಲ್ಬೆಂಡಜಾಲ್ ಮಾತ್ರೆ ವಿತರಣೆ ಮಾಡುವ ಸಮಯದಲ್ಲಿ ಅಂಗನವಾಡಿ ಶಾಲಾ, ಕಾಲೇಜು ಸಿಬ್ಬಂದಿಗಳು ನಿಗಾವಹಿಸಿ ತಮ್ಮ ಎದುರೇ ಮಾತ್ರೆ ನೀಡಬೇಕು ಎಂದರು.