ನವದೆಹಲಿ: ಉದ್ವಿಗ್ನತೆಯನ್ನು ಶಮನಗೊಳಿಸುವ ಆಯ್ಕೆ ಈಗ ಪಾಕಿಸ್ತಾನದ ಕೈಯಲ್ಲಿದೆ ಎಂದು :ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಶ್ರಿ ಹೇಳಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಭಾರತದ ಜೆಟ್ ಹೊಡೆದುರುಳಿಸಲಾಗಿದೆ’ ಎಂಬ ಪಾಕಿಸ್ತಾನದ ಹೇಳಿಕೆಗಳ ಕುರಿತು ಪ್ರತಿಕ್ರಿಯೆ ನೀಡಿ ‘ಪಾಕಿಸ್ತಾನ ಹುಟ್ಟಿದ ಕೂಡಲೇ ಸುಳ್ಳು ಹೇಳಲು ಪ್ರಾರಂಭಿಸಿತು’ ಎಂದು ಹೇಳಿದ್ದಾರೆ.
‘ಆಪರೇಷನ್ ಸಿಂದೂರ್’ ಅಡಿಯಲ್ಲಿ ಭಾರತದ ನಿಖರ ದಾಳಿಯ ನಂತರ ಹೆಚ್ಚುತ್ತಿರುವ ಉದ್ವಿಗ್ನತೆಯ ನಡುವೆ, ಭಾರತೀಯ ಜೆಟ್‌ಗಳನ್ನು “ತಟಸ್ಥಗೊಳಿಸಲಾಗಿದೆ” ಎಂಬ ಪಾಕಿಸ್ತಾನದ ಇತ್ತೀಚಿನ ಹೇಳಿಕೆಯನ್ನು ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಶ್ರಿ ತಿರಸ್ಕರಿಸಿದ್ದು, ಇಸ್ಲಾಮಾಬಾದ್ “ಸುಳ್ಳಿನ ದೀರ್ಘ ಇತಿಹಾಸ” ಹೊಂದಿದೆ ಎಂದು ಟೀಕಿಸಿದ್ದಾರೆ.
ಇದರಲ್ಲಿ ಆಶ್ಚರ್ಯವೇನಿಲ್ಲ. ಪಾಕಿಸ್ತಾನ ಹುಟ್ಟಿದ ತಕ್ಷಣ ಸುಳ್ಳು ಹೇಳಲು ಪ್ರಾರಂಭಿಸಿದ ದೇಶ. 1947 ರಲ್ಲಿ ಪಾಕಿಸ್ತಾನಿ ಸೈನ್ಯವು ಜಮ್ಮು ಮತ್ತು ಕಾಶ್ಮೀರದ ಮೇಲೆ ಹಕ್ಕು ಸಾಧಿಸಿದಾಗ, ನಮಗೆ ಅದರೊಂದಿಗೆ ಯಾವುದೇ ಸಂಬಂಧವಿಲ್ಲ ಎಂದು ವಿಶ್ವಸಂಸ್ಥೆಗೆ ಸುಳ್ಳು ಹೇಳಿದ್ದರು. ಆದ್ದರಿಂದ ಈ ಸುಳ್ಳಿನ ಪ್ರಯಾಣವು 75 ವರ್ಷಗಳ ಹಿಂದೆ ಪ್ರಾರಂಭವಾಯಿತು ಎಂದಿದ್ದಾರೆ.
ಉದ್ವಿಗ್ನತೆ ಕಡಿಮೆ ಮಾಡುವ ಆಯ್ಕೆಯು ಪಾಕಿಸ್ತಾನದ ಮೇಲಿದೆ, ಏಕೆಂದರೆ ಅವರು ಪಹಲ್ಗಾಮ್ ಭಯೋತ್ಪಾದಕ ದಾಳಿಯ ಮೂಲಕ ಉಲ್ಬಣವನ್ನು ಪ್ರಾರಂಭಿಸಿದರು, ಭಾರತವು ಆಪರೇಷನ್ ಸಿಂಧೂರ್ ಮೂಲಕ ಪ್ರತಿಕ್ರಿಯಿಸಿತು ಎಂದು ಹೇಳಿದ್ದಾರೆ.
“ಪರಿಸ್ಥಿತಿಯನ್ನು ಉಲ್ಬಣಗೊಳಿಸುವುದು ನಮ್ಮ ವಿಧಾನವಲ್ಲ, ಏಪ್ರಿಲ್ 22 ರ ಪಹಲ್ಗಾಮ್ ಭಯೋತ್ಪಾದಕ ದಾಳಿಗೆ ಮಾತ್ರ ನಾವು ಪ್ರತಿಕ್ರಿಯಿಸಿದ್ದೇವೆ”. “ಪಾಕಿಸ್ತಾನವು ಪರಿಸ್ಥಿತಿಯನ್ನು ಉಲ್ಬಣಗೊಳಿಸಿತು, ನಾವು ಪ್ರತಿಕ್ರಿಯಿಸಿದ್ದೇವೆ ಅಷ್ಟೇ. ಈಗ ಆಯ್ಕೆ ಪಾಕಿಸ್ತಾನದ ಕೈಯಲ್ಲಿದೆ ಎಂದು ಹೇಳಿದ್ದಾರೆ.