ನವದೆಹಲಿ: ಅಮೆರಿಕದಿಂದ ಜಾಗತಿಕ ಭಯೋತ್ಪಾದಕನೆಂದು ಗುರುತಿಸಲ್ಪಟ್ಟ ಲಷ್ಕರ್-ಎ-ತೊಯ್ಬಾ (LeT) ಸಂಘಟನೆಯ ಹಿರಿಯ ನಾಯಕ ಹಫೀಜ್ ಅಬ್ದುಲ್ ರೌಫ್ ನನ್ನು ಪಾಕಿಸ್ತಾನ “ಮುಗ್ಧ ವ್ಯಕ್ತಿ” ಎಂದು ಕರೆದಿದೆ. ಆದರೆ, ಭಾರತದ ಪ್ರೆಸ್ ಇನ್ಫಾರ್ಮೇಷನ್ ಬ್ಯೂರೋದ (ಪಿಐಬಿ) ಫ್ಯಾಕ್ಟ್ ಚೆಕ್ ಘಟಕವು ಪಾಕಿಸ್ತಾನದ ಈ ವಾದವನ್ನು ಸಂಪೂರ್ಣವಾಗಿ ತಳ್ಳಿಹಾಕಿದೆ.
ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಪಿಐಬಿ, ಪಾಕಿಸ್ತಾನದ ಇಂಟರ್-ಸರ್ವಿಸಸ್ ಪಬ್ಲಿಕ್ ರಿಲೇಶನ್ಸ್ (ಡಿಜಿ ಐಎಸ್‌ಪಿಆರ್) ಮಹಾನಿರ್ದೇಶಕರು ರೌಫ್ ಕೇವಲ “ಸಾಮಾನ್ಯ ವ್ಯಕ್ತಿ” ಎಂದು ಹೇಳಿರುವುದು ಸುಳ್ಳು ಎಂದು ಸ್ಪಷ್ಟಪಡಿಸಿದೆ. ವೈರಲ್ ಆದ ಭಯೋತ್ಪಾದಕನ ಅಂತ್ಯಕ್ರಿಯೆಯ ಚಿತ್ರದಲ್ಲಿ ಸ್ಪಷ್ಟವಾಗಿ ಕಾಣುವ ರೌಫ್, ಜಾಗತಿಕವಾಗಿ ನಿರ್ಬಂಧಿತ ಉಗ್ರ ಎಂದು ಪಿಐಬಿ ಹೇಳಿದೆ.
ಪಾಕಿಸ್ತಾನದ ಮಿಲಿಟರಿ ಹಂಚಿಕೊಂಡಿರುವ ಗುರುತಿನ ವಿವರಗಳು 1999 ರಿಂದ ಲಷ್ಕರ್‌ನ ಹಿರಿಯ ನಾಯಕತ್ವದ ಭಾಗವಾಗಿರುವ ಹಫೀಜ್ ಅಬ್ದುಲ್ ರೌಫ್ ನ ವಿವರಗಳಿಗೆ ನಿಖರವಾಗಿ ಹೊಂದಿಕೆಯಾಗುತ್ತವೆ ಎಂದು ಪಿಐಬಿ ತಿಳಿಸಿದೆ. ಅಷ್ಟೇ ಅಲ್ಲದೆ, ರೌಫ್ ನನ್ನು ಅಮೆರಿಕದ ನಿರ್ಬಂಧಿತ ವ್ಯಕ್ತಿಗಳ ಪಟ್ಟಿಯಲ್ಲಿ ಅಧಿಕೃತವಾಗಿ ಹೆಸರಿಸಲಾಗಿದೆ ಎಂದು ಪಿಐಬಿ ಪುರಾವೆಗಳೊಂದಿಗೆ ವಿವರಿಸಿದೆ.
ಇತ್ತೀಚೆಗೆ, ಮೇ 7 ರಂದು ಭಾರತದ ಸೇನೆಯು ಆಪರೇಷನ್ ಸಿಂಧೂರ್ ಅಡಿಯಲ್ಲಿ ನಡೆಸಿದ ನಿಖರವಾದ ದಾಳಿಯಲ್ಲಿ ಹತರಾದ ಲಷ್ಕರ್ ಕಾರ್ಯಕರ್ತರ ಅಂತ್ಯಕ್ರಿಯೆಯ ಪ್ರಾರ್ಥನೆಯನ್ನು ರೌಫ್ ಮುನ್ನಡೆಸುತ್ತಿರುವ ವಿಡಿಯೋ ವೈರಲ್ ಆಗಿತ್ತು. ಪಹಲ್ಗಾಮ್‌ನಲ್ಲಿ ಪಾಕಿಸ್ತಾನ ಬೆಂಬಿತ ಭಯೋತ್ಪಾದಕರಿಂದ ಭಾರತೀಯ ಪ್ರವಾಸಿಗರ ಹತ್ಯೆಗೆ ಪ್ರತೀಕಾರವಾಗಿ ಈ ಕಾರ್ಯಾಚರಣೆಯನ್ನು ನಡೆಸಲಾಗಿತ್ತು.
ನ್ಯೂಯಾರ್ಕ್ ಟೈಮ್ಸ್ ಅಂಕಣಕಾರ ತಾಹಾ ಸಿದ್ದಿಕಿ ಹಂಚಿಕೊಂಡಿರುವ ವಿಡಿಯೋದಲ್ಲಿ, ರೌಫ್ ಇತರ ಲಷ್ಕರ್ ಸದಸ್ಯರೊಂದಿಗೆ ಅಂತ್ಯಕ್ರಿಯೆಯಲ್ಲಿ ಭಾಗವಹಿಸಿರುವುದು ಸ್ಪಷ್ಟವಾಗಿ ಕಾಣುತ್ತದೆ. ಪ್ರಾರ್ಥನೆಯ ನಂತರ, ಗುಂಪು “ಅಲ್ ಜಿಹಾದ್, ಅಲ್ ಜಿಹಾದ್” ಎಂದು ಘೋಷಣೆ ಕೂಗುತ್ತಿರುವುದು ಕೇಳಿಸುತ್ತದೆ.
ಲಷ್ಕರ್‌ನ ಮುಂಚೂಣಿ ಸಂಘಟನೆಯಾದ ಜಮಾತ್-ಉದ್-ದಾವಾ (ಜುಡಿ) ಯೊಂದಿಗೆ ರೌಫ್ ದೀರ್ಘಕಾಲದಿಂದ ಗುರುತಿಸಿಕೊಂಡಿದ್ದಾನೆ. ಲಷ್ಕರ್ ಸಂಸ್ಥಾಪಕ ಹಫೀಜ್ ಸಯೀದ್, ರಕ್ತ ಸಂಬಂಧಿ ಅಲ್ಲದಿದ್ದರೂ, ರೌಫ್ ದಶಕಗಳಿಂದ ಅವನೊಂದಿಗೆ ನಿಕಟ ಸಂಪರ್ಕ ಹೊಂದಿದ್ದು, ಸಂಘಟನೆಯ ಸೈದ್ಧಾಂತಿಕ ಮತ್ತು ಕಾರ್ಯಾಚರಣೆ ಗುಂಪಿನ ಪ್ರಮುಖ ಸದಸ್ಯನಾಗಿದ್ದಾನೆ. ಭಾರತೀಯ ಸೇನೆಯು ಸಹ ಇತ್ತೀಚೆಗೆ ರೌಫ್ ಜೊತೆಗೆ ಅಂತ್ಯಕ್ರಿಯೆಯಲ್ಲಿ ಭಾಗವಹಿಸಿದ್ದ ಹಲವಾರು ಪಾಕಿಸ್ತಾನಿ ಸೇನಾ ಅಧಿಕಾರಿಗಳ ಹೆಸರನ್ನು ಬಹಿರಂಗಪಡಿಸಿತ್ತು. ರೌಫ್‌ನನ್ನು ಯುಎನ್‌ಎಸ್‌ಸಿ 1267 ನಿರ್ಬಂಧಗಳ ಅಡಿಯಲ್ಲಿ ಗುರುತಿಸಲಾಗಿದೆ ಮತ್ತು ಅಮೆರಿಕದ ಖಜಾನೆ ಇಲಾಖೆಯು ಆತನನ್ನು ಲಷ್ಕರ್‌ನ ಪ್ರಮುಖ ಕಾರ್ಯಕರ್ತ ಎಂದು ಪಟ್ಟಿ ಮಾಡಿದೆ.
🚨CALLING OUT PAKISTAN'S BLUFF
— PIB Fact Check (@PIBFactCheck) May 12, 2025
Pakistan’s DG ISPR claims that LeT terrorist Hafiz Abdur Rauf is an 'Innocent Man'#PIBFactCheck
❌DG ISPR's "COMMON MAN" is a Globally Sanctioned Terrorist – clearly visible in the viral terrorist funeral picture.
✅The identity details shared… pic.twitter.com/xVpPkJp2vP