ಕೋಲ್ಕತ್ತಾ: ಪಶ್ಚಿಮ ಬಂಗಾಳದ ಹೂಗ್ಲಿ ಜಿಲ್ಲೆಯ ತನ್ನ ಪೂರ್ವಜರ ಮನೆಯಿಂದ ಕಳ್ಳರು ಪದಕ ಮತ್ತು ಸ್ಮರಣಿಕೆಗಳನ್ನು ಕದ್ದಿದ್ದಾರೆ ಎಂದು ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಮಾಜಿ ಈಜುಗಾರ್ತಿ ಬುಲಾ ಚೌಧರಿ ಹೇಳಿದ್ದಾರೆ.
ನನ್ನ ಇಡೀ ಜೀವನದಲ್ಲಿ ನನ್ನ ಕಠಿಣ ಪರಿಶ್ರಮ ಮತ್ತು ಸಮರ್ಪಣೆಯ ಮೂಲಕ ಗಳಿಸಿದ್ದನ್ನೆಲ್ಲ ಕಳ್ಳರು ಕದ್ದೊಯ್ದಿದ್ದಾರೆ. SAAF ಕ್ರೀಡಾಕೂಟದಲ್ಲಿ ನಾನು ಗೆದ್ದ ಆರು ಚಿನ್ನದ ಪದಕಗಳು ಮತ್ತು ಪದ್ಮಶ್ರೀ ಸೇರಿದಂತೆ ಎಲ್ಲಾ ಪದಕಗಳನ್ನು ಕದ್ದೊಯ್ದಿದ್ದಾರೆ ಎಂದು ಚೌಧರಿ ತಿಳಿಸಿದ್ದಾರೆ.
ಕಳ್ಳರು ಎಲ್ಲಾ ಸ್ಮರಣಿಕೆಗಳನ್ನು ಕದ್ದಿದ್ದಾರೆ. ಆದರೆ, ಅರ್ಜುನ ಪ್ರಶಸ್ತಿ ಮತ್ತು ಟೆನ್ಸಿಂಗ್ ನಾರ್ಗೆ ಪದಕಗಳನ್ನು ಬಿಟ್ಟು ಹೋಗಿದ್ದಾರೆ. ಬಹುಶಃ ಕಳ್ಳರು ಅರ್ಜುನ ಪ್ರಶಸ್ತಿ ಮತ್ತು ಟೆನ್ಸಿಂಗ್ ನಾರ್ಗೆ ಪದಕಗಳನ್ನು ಗುರುತಿಸಲಿಲ್ಲ, ಏಕೆಂದರೆ ಅವು ಗಾತ್ರದಲ್ಲಿ ಚಿಕ್ಕದಾಗಿದ್ದವು ಎಂದು ಅವರು ಹೇಳಿದ್ದಾರೆ.
ಚೌಧರಿ ಅವರು ತಮ್ಮ ಹಿಂಡ್ ಮೋಟರ್ ನಿವಾಸದಲ್ಲಿ ಇದು ಮೂರನೇ ಕಳ್ಳತನವಾಗಿದೆ ಎಂದು ಆರೋಪಿಸಿದ್ದಾರೆ.
ಪ್ರಸ್ತುತ ಕೋಲ್ಕತ್ತಾದ ಕಸ್ಬಾ ಪ್ರದೇಶದಲ್ಲಿ ತನ್ನ ಕುಟುಂಬದೊಂದಿಗೆ ವಾಸಿಸುತ್ತಿರುವ ಚೌಧರಿಯವರ ಪೂರ್ವಜರ ಮನೆಯನ್ನು ಅವರ ಸಹೋದರ ಮಿಲೋನ್ ಚೌಧರಿ ನೋಡಿಕೊಳ್ಳುತ್ತಿದ್ದಾರೆ. ಅವರು ಸ್ವಲ್ಪ ದೂರದಲ್ಲಿ ವಾಸಿಸುತ್ತಿದ್ದು, ಆಗಾಗ ಭೇಟಿ ನೀಡುತ್ತಾರೆ.
ಸ್ವಾತಂತ್ರ್ಯ ದಿನದಂದು, ಅದು ರಜಾದಿನವಾಗಿತ್ತು, ಮಿಲೋನ್ ತನ್ನ ಸಹೋದರಿಯ ಸೂಚನೆಯ ಮೇರೆಗೆ ಮನೆಗೆ ಸ್ವಚ್ಛಗೊಳಿಸಲು ಹೋದರು. ಒಳಗೆ ಹೋದಾಗ, ಹಿಂಭಾಗದ ಗೇಟ್ ಮುರಿದು ಕೊಠಡಿಗಳಲ್ಲಿ ಲೂಟಿಯಾಗಿರುವುದನ್ನು ನೋಡಿ ಅವರು ಆಘಾತಕ್ಕೊಳಗಾದರು ಎಂದು ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ಹೇಳಿದ್ದಾರೆ.
ಸುದ್ದಿ ತಿಳಿದು ಕೋಲ್ಕತ್ತಾದಿಂದ ಉತ್ತರಪಾರಕ್ಕೆ ಧಾವಿಸಿದ ಚೌಧರಿ, ಈ ಹಿಂದೆಯೂ ಕಳ್ಳತನ ನಡೆದಿರುವುದನ್ನು ನೆನಪಿಸಿಕೊಂಡರು ಮತ್ತು ಪೊಲೀಸ್ ದೂರುಗಳು ದಾಖಲಾಗಿದ್ದರೂ, ಸರಿಯಾದ ತನಿಖೆ ನಡೆದಿಲ್ಲ ಎಂದು ಆರೋಪಿಸಿದ್ದಾರೆ.