ಬೆಂಗಳೂರು: ಎಲ್ಲೆಡೆ ಬೆಳಕಿನ ಹಬ್ಬ ದೀಪಾವಳಿ ಸಡಗರ-ಸಂಭ್ರಮ ಮನೆ ಮಾಡಿದೆ. ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಪಟಾಕಿ ಶಬ್ಧಗಳು ಜೋರಾಗಿವೆ. ದೀಪಾವಳಿ ಪಟಾಕಿ ಅವಘಡದಿಂದಾಗಿ 190 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಹಾಗೂ 8 ಮಂದಿ ಕಣ್ಣನ್ನೇ ಕಳೆದುಕೊಂಡಿದ್ದಾರೆ.
ಪಟಾಕಿ ಹೊಡೆಯುವವರು ಮಾತ್ರವಲ್ಲ ಪಟಾಕಿ ಸಿಡಿಸುವುದನ್ನು ನೋಡಲು ಹೋಗಿದ್ದ ಮಕ್ಕಳು, ಯುವಕರು ಕೂಡ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ. ನಾರಾಯಣ ನೇತ್ರಾಲಯಕ್ಕೆ 75 ಜನರನ್ನು ದಾಖಲು ಮಾಡಲಾಗಿದ್ದು, ಮಿಂಟೋ ಆಸ್ಪತ್ರೆಗೆ 25 ಮಂದಿ ದಾಖಲಾಗಿದ್ದಾರೆ. ಹಲವರು ತುರ್ತು ಚಿಕಿತ್ಸೆ ಪಡೆದು ಮನೆಗೆ ಮರಳಿದ್ದಾರೆ .
ವಿಕ್ಟೋರಿಯಾ ಆಸ್ಪತ್ರೆಯ ಮಹಾಬೋಧಿ ಬರ್ನ್ಸ್ ಸೆಂಟರ್ ಮತ್ತು ಮಿಂಟೋ ಕಣ್ಣಿನ ಆಸ್ಪತ್ರೆ ಹಬ್ಬದ ಸಮಯದಲ್ಲಿ ಪಟಾಕಿಯಿಂದ ಗಾಯಗೊಂಡವರಿಗೆ ಸಮಯಕ್ಕೆ ಸರಿಯಾಗಿ ಚಿಕಿತ್ಸೆ ನೀಡಲು ವಿಶೇಷ ತುರ್ತು ವ್ಯವಸ್ಥೆಗಳನ್ನು ಮಾಡಿಕೊಂಡಿತ್ತು.ಪಟಾಕಿ, ಬೆಂಕಿಯಿಂದ ಸುಟ್ಟ ಗಾಯಗಳನ್ನು ನಿಭಾಯಿಸಲು ವಿಕ್ಟೋರಿಯಾ ಆಸ್ಪತ್ರೆಯು ವೈದ್ಯರು ಮತ್ತು ಶುಶ್ರೂಷಕ ಸಿಬ್ಬಂದಿಯ ನಿರಂತರ ಕರ್ತವ್ಯದೊಂದಿಗೆ ದಿನದ 24 ಗಂಟೆಯೂ ಕಾರ್ಯನಿರ್ವಹಿಸುತ್ತಿದ್ದಾರೆ.
ಮಿಂಟೋ ಕಣ್ಣಿನ ಆಸ್ಪತ್ರೆಯು 25 ಹಾಸಿಗೆಗಳನ್ನು ಮೀಸಲಿಟ್ಟಿದೆ. ಪುರುಷರು, ಮಹಿಳೆಯರಿಗೆ ತಲಾ 10 ಮತ್ತು ಮಕ್ಕಳಿಗೆ 5 ಬೆಡ್ಗಳನ್ನು ಮುನ್ನೆಚ್ಚರಿಕಾ ಕ್ರಮವಾಗಿ ಮೀಸಲಿಡಲಾಗಿದೆ.ಐದು ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಪಟಾಕಿಗಳನ್ನು ಹಿಡಿಯಲು ಅವಕಾಶ ನೀಡಬೇಡಿ ಎಂದು ಪೋಷಕರಿಗೆ ವೈದ್ಯರು ಮನವಿ ಮಾಡಿದ್ದಾರೆ.ಮಕ್ಕಳು ಪಟಾಕಿ ಸಿಡಿಸುವಾಗ ಪೋಷಕರು ಎಚ್ಚರದಿಂದಿರಬೇಕು ಮತ್ತು ಜೊತೆಯಲ್ಲಿ ಇರಬೇಕು. ಸುಲಭವಾಗಿ ಬೆಂಕಿ ಹಿಡಿಯದ ಹತ್ತಿ ಬಟ್ಟೆಗಳನ್ನು ಧರಿಸಿ ಮತ್ತು ಒಂದು ಬಕೆಟ್ ನೀರನ್ನು ಹತ್ತಿರ ಇಟ್ಟುಕೊಳ್ಳಿ ಎಂದು ಮಿಂಟೋ ಆಸ್ಪತ್ರೆಯ ನರ್ಸಿಂಗ್ ಅಧೀಕ್ಷಕಿ ಸಲಹೆ ನೀಡಿದ್ದಾರೆ.
ತುರ್ತು ಸಹಾಯವಾಣಿಗಳು
ಮಿಂಟೋ ಕಣ್ಣಿನ ಆಸ್ಪತ್ರೆ: 080-26707176 / 26706221
ವಿಕ್ಟೋರಿಯಾ ಆಸ್ಪತ್ರೆ: 080-2670 1150 EXT 201-202